ಜಗತ್ತಿನ ಅತಿ ಶ್ರೀಮಂತ ಭಿಕ್ಷುಕ ಭರತ್ ಜೈನ್ ಬಳಿ ಏನೇನಿದೆ ?
ಏಳೂವರೆ ಕೋಟಿ ರೂಪಾಯಿಯ ಒಡೆಯ ಭಿಕ್ಷುಕ ಭರತ್ ಜೈನ್ !

ಭಿಕ್ಷುಕ ಭರತ್ ಜೈನ್
ಭಿಕ್ಷೆ ಬೇಡಿಯಾದರೂ ಬದುಕುತ್ತೀನಿ ಅಂದ್ರೆ ಯಾರಲ್ಲಾದರೂ ಕಾಡಿ ಬೇಡಿ ಎರಡೊತ್ತಿನ ಊಟ, ಎಲ್ಲದರೊಂದು ಮಲಗೋ ಜಾಗ ಸಿಕ್ಕಿದ್ರೆ ಸಾಕು ಅನ್ನೋ ಅರ್ಥ ಅಂತ ಎಲ್ಲರಿಗೂ ಗೊತ್ತಿದೆ. ಆದರೆ ಭಿಕ್ಷೆ ಬೇಡಿ ಕೋಟ್ಯಧಿಪತಿಯಾಗ್ತೀನಿ ಅಂತ ಹೊರಟವನೊಬ್ಬನ ಕತೆ ಇಲ್ಲಿದೆ. ಈತ ಭಿಕ್ಷೆ ಬೇಡುತ್ತಿರೋದು ಕೇವಲ ಎರಡೊತ್ತಿನ ಊಟಕ್ಕಾಗಿ ಅಲ್ಲ. ಭಿಕ್ಷೆಯಿಂದಲೇ ಈತ ಇವತ್ತು ಕೋಟ್ಯಧಿಪತಿಯಾಗಿದ್ದಾನೆ. ಆದರೂ ಭಿಕ್ಷೆ ಬೇಡುತ್ತಲೇ ಇದ್ದಾನೆ.
ಭಿಕ್ಷುಕರು ಎಂದರೆ ಎಲ್ಲರ ಕಣ್ಮುಂದೆಯೂ ಸಾಮಾನ್ಯ ಚಿತ್ರವೊಂದು ಬರುತ್ತದೆ. ಆದರೆ ಅಂಥದೊಂದು ಸಾಮಾನ್ಯ ಚಿತ್ರವನ್ನು ದಾಟಿ, ಭಿಕ್ಷುಕರೂ ಶ್ರೀಮಂತರಾಗಿರುತ್ತಾರೆ ಎಂದು ಗೊತ್ತಾದರೆ ಹೇಗಿರಬಹುದು?ಅದಕ್ಕಿಂತ ಹೆಚ್ಚಾಗಿ, ಜಗತ್ತಿನ ಅತಿ ಶ್ರೀಮಂತ ಭಿಕ್ಷುಕ ಇರುವುದು ನಮ್ಮ ದೇಶದಲ್ಲಿಯೇ ಎಂದು ಗೊತ್ತಾದರೆ ಹೇಗಿರಬಹುದು?
ಇದೇನಿದು ಭಿಕ್ಷುಕ ಶ್ರೀಮಂತನಾಗಿರುವುದೆಂದರೆ ಎಂಬ ಪ್ರಶ್ನೆ ಮೂಡದೇ ಇರುವುದಿಲ್ಲ. ಆದರೆ ಇದು ನಿಜ. ಭಿಕ್ಷೆ ಬೇಡುವ ಮೂಲಕವೇ ಕೋಟ್ಯಂತರ ರೂಪಾಯಿ ಆದಾಯ ಗಳಿಸಿದವರೊಬ್ಬರಿದ್ದಾರೆ. ಮುಂಬೈನ ಭರತ್ ಜೈನ್ ಅಂತಹ ಕೋಟ್ಯಧಿಪತಿ. ಅವರು ವಿಶ್ವದಲ್ಲಿಯೇ ಅತಿ ಶ್ರೀಮಂತ ಭಿಕ್ಷುಕ ಎಂದು ಹೇಳಲಾಗುತ್ತದೆ.
ಭಿಕ್ಷಾಟನೆಯ ಮೂಲಕವೇ ಭರತ್ ಜೈನ್ ಏಳೂವರೆ ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಅವರ ತಿಂಗಳ ಗಳಿಕೆ 60ರಿಂದ 75 ಸಾವಿರದವರೆಗೂ ಇದೆ ಎನ್ನುತ್ತಿವೆ ವರದಿಗಳು. ವಿಶ್ವದ ಶ್ರೀಮಂತ ಭಿಕ್ಷುಕ ಎನಿಸಿಕೊಂಡಿರುವ ಭರತ್ ಜೈನ್ ಮುಂಬೈ ಹಾಗೂ ಪುಣೆಯಲ್ಲಿ ಸ್ವಂತ ಮನೆಗಳನ್ನು ಹೊಂದಿದ್ದಾರೆ. ಮುಂಬೈನಲ್ಲಿಯೇ ಈತನಿಗೆ 1.2 ಕೋಟಿ ಮೌಲ್ಯದ ಎರಡು ಬಿ ಎಚ್ ಕೆ ಫ್ಲ್ಯಾಟ್ ಗಳಿವೆ.
ಹಾಗೆಯೇ ಥಾಣೆಯಲ್ಲಿ ಕೋಟ್ಯಂತರ ಮೌಲ್ಯದ ಎರಡು ಅಂಗಡಿಗಳನ್ನೂ ಹೊಂದಿದ್ದಾರೆ. ಅವನ್ನು ತಿಂಗಳಿಗೆ 30 ಸಾವಿರ ಬಾಡಿಗೆಗೆ ನೀಡಿದ್ದಾರಂತೆ. ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣವನ್ನೂ ಪಡೆದಿರದ ಭರತ್ ಜೈನ್, ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಓದಿಸಿದ್ದಾರೆ.
ಪತ್ನಿ, ಇಬ್ಬರು ಪುತ್ರರು, ಸಹೋದರ ಹಾಗೂ ತನ್ನ ತಂದೆಯೊಂದಿಗೆ ವಾಸವಾಗಿದ್ದಾರೆ.
ಕೋಟ್ಯಾಂತರ ರೂಪಾಯಿ ಹಣ, ದೊಡ್ಡ ಬಂಗಲೆ, ಇತರೆ ಐಷಾರಾಮಿ ಜೀವನಕ್ಕೆ ಬೇಕಾದ ಎಲ್ಲ ಸೌಲಭ್ಯಗಳು ಇದ್ದರೂ ಭರತ್ ಜೈನ್ ಈಗಲೂ ಭಿಕ್ಷಾಟನೆ ಮಾಡುವುದನ್ನು ನಿಲ್ಲಿಸಿಲ್ಲ. ತನ್ನ ಕುಟುಂಬಸ್ಥರು ಭಿಕ್ಷಾಟನೆ ಮಾಡಬೇಡಿ ಎಂದು ಹೇಳಿದರೂ ಭರತ್ ಜೈನ್ ಈಗಲೂ ಭಿಕ್ಷಾಟನೆ ಮಾಡುತ್ತಾರೆ. ಸಾಮಾನ್ಯವಾಗಿ ಭರತ್ ಜೈನ್ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ಸಮೀಪ ಮತ್ತು ಮುಂಬೈನ ಅಜಾದ್ ಮೈದಾನದ ಸಮೀಪದ ಭಿಕ್ಷಾಟನೆ ಮಾಡುತ್ತಾರೆ.
ಭರತ್ ಜೈನ್ ಕುಟುಂಬ ಸ್ಟೇಷನರಿ ಸ್ಟೋರ್ ನಡೆಸುತ್ತಿದ್ದು, ಇದರಿಂದಲೂ ಆದಾಯ ಗಳಿಸುತ್ತಾರೆ. ಕೆಲವರು ದಿನಕ್ಕೆ 12ರಿಂದ 14 ತಾಸು ಮೈಮುರಿದು ದುಡಿದರೂ ಕೆಲವು ನೂರು ರೂಪಾಯಿಗಳನ್ನು ಗಳಿಸುವಷ್ಟರಲ್ಲಿ ಹೈರಾಣಾಗುತ್ತಾರೆ. ಆದರೆ ಭರತ್ ಜೈನ್ ಕೇವಲ 10ರಿಂದ 12 ತಾಸುಗಳಲ್ಲಿ ಕೂತಲ್ಲೇ ಎರಡರಿಂದ ಎರಡೂವರೆ ಸಾವಿರ ರೂಪಾಯಿ ಸಂಪಾದಿಸುತ್ತಾರೆ. ಇದೊಂತರ ವಿಪರ್ಯಾಸ. ಆದರೆ ಇದು ಈ ದೇಶದಲ್ಲಿ ಮಾನವೀಯತೆ ಎಂಬುದು ಇನ್ನೂ ಅಗಾಧವಾಗಿದೆ ಎಂಬುದರ ಸಾಕ್ಷಿಯೂ ಹೌದು.







