ಭೂ ಪರಿವರ್ತಿತ ಮನೆ ನಿರ್ಮಾಣ ಸಮಸ್ಯೆ ಬಗ್ಗೆ ಸಭೆ: ಸಚಿವ ರಹೀಂ ಖಾನ್

ಬೆಳಗಾವಿ: ಭೂ ಪರಿವರ್ತಿತ ಹಾಗೂ ನಮೂನೆ-3ರಂತೆ ಗುರುತಿಸಿರುವ ನಿವೇಶನಗಳಲ್ಲಿ ಮನೆ ನಿರ್ಮಾಣ ಸಂಬಂಧ ಆಯಾ ಕ್ಷೇತ್ರ ವ್ಯಾಪ್ತಿಯ ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದ್ದಾರೆ.
ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿ, ನಿವೇಶನಗಳನ್ನು ಹೊಂದಿರುವ ಖಾತೆದಾರರಿಗೆ ಹೊಸ ಮನೆ ನಿರ್ಮಾಣಕ್ಕಾಗಿ ಕಟ್ಟಡ ಪರವಾನಗಿ ದೊರೆಯದೆ ಅಥವಾ ಈಗಾಗಲೇ ವಾಸವಿರುವ ಮನೆಗಳ ನವೀಕರಣ ಅಥವಾ ವಿಸ್ತರಣೆಗೆ, ಕೂಡ ಪರವಾನಗಿ ದೊರೆಯದೆ ಉಂಟಾಗಿರುವ ಸಮಸ್ಯೆ ಬಗೆಹರಿಸಲಾಗುವುದು. ಈ ಸಂಬಂಧ ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದರು.
ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಭೂ-ಪರಿವರ್ತನೆ ಗೊಂಡಿರುವ ನಿವೇಶನಗಳಿಗೆ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ನಕ್ಷೆಗೆ ಅನುಮೋದನೆಗೊಂಡಿರುವ ನಿವೇಶನಗಳಿಗೆ ಸ್ಥಳೀಯ ಸಂಸ್ಥೆಯಿಂದ ನಮೂನೆ-3 ಹಾಗೂ ಕಟ್ಟಡ ಪರವಾನಿಗೆಗೆ ಈಗಾಗಲೇ ಅನುಮೋದನೆ ಸಹ ನೀಡಲಾಗಿದೆ ಎಂದು ತಿಳಿಸಿದರು.
Next Story





