ಕಿನ್ನರಿ ನುಡಿಸುವ ‘ಕಿನ್ನರಿ ಜೋಗಿ’ಗಳು

ಕರ್ನಾಟಕದಲ್ಲಿರುವ ಬಹುತೇಕ ಕಿನ್ನರಿ ಜೋಗಿಗಳ ಮೂಲಭಾಷೆ ಮರಾಠಿ, ಇವರಾಡುವ ಮರಾಠಿ ಮತ್ತು ಕನ್ನಡ ಎರಡೂ ಮಿಶ್ರಣಗೊಂಡು ಇವರದೇ ಆದ ಒಂದು ಉಪಭಾಷೆಯೊಂದು ಬಳಕೆಯಲ್ಲಿದೆ. ಆದರೆ, ಕರ್ನಾಟಕದಲ್ಲಿರುವ ಕಿನ್ನರಿ ಜೋಗಿಗಳು ನಿರರ್ಗಳವಾಗಿ ಕನ್ನಡ ಮಾತಾಡಬಲ್ಲರು ಮತ್ತು ಹಾಡಬಲ್ಲರು.
ರಾಷ್ಟ್ರಕವಿ ಕುವೆಂಪು ಅವರ ಸುಪ್ರಸಿದ್ಧ ಮಕ್ಕಳ ಕವನ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಕನ್ನಡಿಗರಿಗೆ ಚಿರಪರಿಚಿತ ಹಾಡಾಗಿದೆ. ಇದು ಜಗತ್ತಿನ ಪ್ರಸಿದ್ಧ ಕತೆಯಾದ ‘ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕತೆಯಾಧಾರಿತ ಕನ್ನಡ ರೂಪಾಂತರ ಎನ್ನುತ್ತಾರೆ. ತುಂಗಾ ತೀರದ ಬೊಮ್ಮನಹಳ್ಳಿಯಲ್ಲಿ ಇಲಿಗಳ ಕಾಟ ಸಹಿಸಲಸಾಧ್ಯ ಎಂದಾಗ ಕಿಂದರಿ ಜೋಗಿಯೊಬ್ಬ ತನ್ನ ತುತ್ತೂರಿಯ ನಾದದಿಂದ ಇಲಿಗಳನ್ನು ದೂರಮಾಡುವ ಮತ್ತು ಊರವರು ಮೋಸ ಮಾಡಿದಾಗ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ವಾರಸ್ಯಕರ ಕಥೆ ಇದು. ಈಗ ಹೇಳಲು ಹೊರಟಿರುವುದು ಈ ‘ಕಿಂದರ ಜೋಗಿ’ ಅಥವಾ ‘ಕಿನ್ನರಿ ಜೋಗಿ’ ಎಂಬ ಸಮುದಾಯದ ಕತೆ.
ಕರ್ನಾಟಕದ ವೃತ್ತಿಗಾಯಕ ಪರಂಪರೆಯಲ್ಲಿ ಅತ್ಯಂತ ಮುಖ್ಯವಾದ ಈ ‘ಕಿನ್ನರಿ ಜೋಗಿ’ಗಳ ಗಾಯನವರ್ಗ ಹಾಡಿನಲ್ಲಿಯೇ ಬಾಳು ಸವೆಸಿದ ವಿಶಿಷ್ಟತೆಯುಳ್ಳದ್ದು. ತಲೆಗೆ ಬಣ್ಣದ ಮುಂಡಾಸು, ಗಾಜಿನ ಕಡ್ಡಿಯ ಗುಳೋಪು, ತಲೆ ತುಂಬ ಬಣ್ಣಬಣ್ಣದ ತುರಾಯಿ, ಕರಿಯ ನಿಲುವಂಗಿ, ಕಚ್ಚೆ ಪಂಚೆ, ಕುತ್ತಿಗೆ ತುಂಬ ಉದ್ದನೆಯ ಮುತ್ತಿನ ಸರಗಳು, ಕರಿಯ ಕೋಟಿನ ಮೇಲೆ ಕಸೂತಿಯ ಚಿತ್ತಾರದ ಅಡ್ಡ ಶಲ್ಯ, ಕಿವಿಗೆ ಕರ್ಣ ಕುಂಡಲ ಮತ್ತು ಕಾಪಾಲಿ, ಕೈಯಲ್ಲಿ ಕಿನ್ನರಿ, ಕಾಲಿಗೆ ಗೆಜ್ಜೆ, ಹೆಗಲಿಗೆ ಜೋಳಿಗೆ, ತೀಡಿದ ಹುಬ್ಬು, ಪೊದೆ ಮೀಸೆಯ ಅಂಚಲ್ಲಿ ನಸುನಗುವ ಮುಖ, ಇಂತಹ ರಂಗಿನ ವೇಷದ ಕಿನ್ನರಿ ಜೋಗಿಗಳು ಊರ ಬೀದಿಯಲ್ಲಿ ಹೊರಟರೆಂದರೆ, ಅವರ ಹಿಂದೆ ಮಕ್ಕಳ ದಂಡೋ ದಂಡು. ಮನೆಮನೆಯ ಮುಂದೆ ನಿಂತು ಸುಮಧುರ ಕಿನ್ನರಿಯನ್ನು ಮೀಟಿ ನುಡಿಸುತ್ತ, ಕಿರುಗೆಜ್ಜೆಯ ಲಯದೊಂದಿಗೆ ಈ ಸುಂದರರು ಹಾಡಲು ತೊಡಗಿದರೆಂದರೆ, ಮೊರದ ತುಂಬ ಧಾನ್ಯ ತುಂಬಿ ನೀಡಲು ಬಂದ ಗರತಿ ಹಾಗೆಯೇ ಪರವಶಳಾಗಿ ನಿಲ್ಲಬೇಕು! ಇಲ್ಲಿ ಮಾಸ್ತಿಯವರ ‘ಜೋಗೋರ ಅಂಜನಪ್ಪನ ಕೋಳಿ ಕತೆ’ ನೆನಪಾಗುತ್ತದೆ, ಅಂತೆಯೇ ನಮ್ಮ ಬಾಲ್ಯದಲ್ಲಿ ಬಂದು ಹೋದ ಬಣ್ಣಬಣ್ಣದ ಕಿನ್ನರಿ ಜೋಗಿಗಳು ಕಣ್ಣಮುಂದೆ ಹಾದುಹೋಗುತ್ತಾರೆ.
‘ಕಿನ್ನರಿ ಜೋಗಿ’ ಅಥವಾ ‘ಕಿಂದರ ಜೋಗಿ’ ಎಂದು ಕರೆಯಲಾಗುವ ಈ ವರ್ಣರಂಜಿತ ಸಮುದಾಯದ ಕುರಿತು ಡಾ.ಹಿ.ಚಿ. ಬೋರಲಿಂಗಯ್ಯ ಮತ್ತು ಡಾ.ಎ.ಎಸ್. ಪ್ರಭಾಕರ್ ಸಂಪಾದಿಸಿರುವ ಕರ್ನಾಟಕ ಬುಡಕಟ್ಟು ಸಚಿತ್ರ ಕೋಶದಲ್ಲಿ ಸುಂದರ ಚಿತ್ರಗಳೊಂದಿಗೆ ಈ ವಿವರಗಳಿವೆ.
ತಮ್ಮ ಮೂಲವನ್ನು ಮಹಾಭಾರತದ ಕಾಲಘಟ್ಟಕ್ಕೆ ಕೊಂಡೊಯ್ಯುವ ಕಿನ್ನರಿ ಜೋಗಿಗಳು ಮೂಲತಃ ಭೈರವನ ಆರಾಧಕರು, ನಾಥ ಪಂಥದ ಅನುಯಾಯಿಗಳು. ಇವರ ಕೈಗೆ ಕಿನ್ನರಿ ಕೊಟ್ಟವರು ಜೋಗಿ ಮಠದ ಸಿದ್ದರು ಎನ್ನುತ್ತಾರೆ. ಮಂಗಳೂರಿನ ಕದ್ರಿ ಮತ್ತು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮುಂತಾದ ಶೈವ ಆರಾಧನಾ ಕೇಂದ್ರಗಳಿಗೂ ಈ ಕಿಂದರಿ ಜೋಗಿಗಳಿಗೂ ಹತ್ತಿರದ ಸಂಬಂಧಗಳಿವೆ. ಅಂತೆಯೇ ಮೈಲಾರನ ಭಕ್ತರಾದ ಗೊರವರು, ಯಲ್ಲಮ್ಮನ ಭಕ್ತರಾದ ಜೋಗಪ್ಪರು, ಜೋಗತಿಯರಿಗೂ ಇವರೊಂದಿಗೆ ಸಂಬಂಧವಿದೆ.
ಕರ್ನಾಟಕದಲ್ಲಿರುವ ಬಹುತೇಕ ಕಿನ್ನರಿ ಜೋಗಿಗಳ ಮೂಲಭಾಷೆ ಮರಾಠಿ, ಇವರಾಡುವ ಮರಾಠಿ ಮತ್ತು ಕನ್ನಡ ಎರಡೂ ಮಿಶ್ರಣಗೊಂಡು ಇವರದೇ ಆದ ಒಂದು ಉಪಭಾಷೆಯೊಂದು ಬಳಕೆಯಲ್ಲಿದೆ. ಆದರೆ, ಕರ್ನಾಟಕದಲ್ಲಿರುವ ಕಿನ್ನರಿ ಜೋಗಿಗಳು ನಿರರ್ಗಳವಾಗಿ ಕನ್ನಡ ಮಾತಾಡಬಲ್ಲರು ಮತ್ತು ಹಾಡಬಲ್ಲರು. ಇದೇ ರೀತಿ ಜೋಗಿ, ಹಂದಿಜೋಗಿ, ಹಂಡಿಜೋಗಿ, ಡಬ್ಬಾ ಜೋಗಿ ಅಂತೆಲ್ಲ ಹೆಸರಿನ ಜೋಗಿಗಳಿದ್ದಾರೆ. ಕಿನ್ನರಿ ಜೋಗಿಗಳಿಗೂ ಇವರಿಗೂ ಯಾವುದೇ ರೀತಿಯ ಸಾಂಸ್ಕೃತಿಕ ಸಂಬಂಧಗಳಿದ್ದಂತಿಲ್ಲ. ಆದರೆ ಸಾಮಾಜಿಕ ಸಂಬಂಧಗಳಿದ್ದಂತಿವೆ. ಕಿನ್ನರಿಜೋಗಿ, ಡಬ್ಬಜೋಗಿ, ಎಣ್ಣೆಜೋಗಿ, ಬಳಗಾರ ಜೋಗಿ, ಕುಣಬಿ ಜೋಗಿ, ಹಂದಿಜೋಗಿ, ಹಿಂದೂ ಜೋಗಿ ಇತ್ಯಾದಿಯಾಗಿ ಅವರವರ ವೃತ್ತಿಗಳನ್ನು ಆಧರಿಸಿ ಈ ಉಪಜಾತಿಗಳು ಸೃಷ್ಟಿಯಾಗಿವೆ. ಇವರಲ್ಲನೇಕರು ಇಂದಿಗೂ ನೆಲೆಯಿಲ್ಲದೆ ಅಲೆಮಾರಿಗಳಾಗಿ ಊರೂರು ಅಲೆಯುತ್ತಾ, ಹಾಡುತ್ತಾ, ಕಿನ್ನರಿ ನುಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಕದ್ರಿ ಮತ್ತು ಅದಿಚುಂಚನಗಿರಿಗಳು ಇವರ ಮೂಲಮಠಗಳಾಗಿದ್ದರೂ ಸೊರಬ ತಾಲೂಕಿನ ಚಂದ್ರಗುತ್ತಿ, ಚಿತ್ರದುರ್ಗ ಜಿಲ್ಲೆಯ ಚಂದ್ರಗಿರಿ, ಧಾರವಾಡ ಜಿಲ್ಲೆಯ ತುರಬೆ ಗುಡ್ಡ ಇವರ ಉಪಮಠಗಳಾಗಿವೆ.
ಈಗಿನ ಪರಿಸ್ಥಿತಿಯಲ್ಲಿ ಕಿನ್ನರಿ ಜೋಗಿಗಳ ಬದುಕು ಬಹಳ ದುಸ್ತರವಾಗಿದೆ. ಕಲೆಯನ್ನೇ ಜೀವನಾಧಾರವಾಗಿ ಸ್ವೀಕರಿಸಿ ಧಾರ್ಮಿಕ ಜಗತ್ತಿಗೆ ತಮ್ಮನ್ನು ಅರ್ಪಿಸಿಕೊಂಡವರು ಇಂದು ಬೀದಿಗೆ ಬಿದ್ದಿದ್ದಾರೆ. ಇವರ ಮನೆಗಳ ಹೆಣ್ಣುಮಕ್ಕಳು ಹಳ್ಳಿಕೇರಿ ಅಲೆಯುತ್ತಾ ಬಳೆ, ಕುಂಕುಮ, ಕರಿಮಣಿ, ಸೂಜಿದಾರ, ಬಣ್ಣದ ರಿಬ್ಬನ್‌ಗಳನ್ನು ಬೀದಿಬೀದಿಗಳಲ್ಲಿ ಮಾರುತ್ತಾ ಜೀವಸವೆಸುತ್ತಾರೆ. ಕಿನ್ನರ ಜೋಗಿಗಳ ಮನಸೂರೆಗೊಳ್ಳುವ ಕಿನ್ನರಿ ರಾಗವನ್ನು ಈಗ ಕೇಳುವವರೇ ಇಲ್ಲ!
ಕಿನ್ನರಿ ಜೋಗಿಗಳ ಈ ಬರಹ ಬರೆಯುವಾಗ ನನ್ನ ಜಾನಪದ ಹಾಡುಗಾರ ಗೆಳೆಯ ಬಾನಂದೂರು ಕೆಂಪಯ್ಯ ತನ್ನ ಕಂಚಿನ ಕಂಠದಿಂದ ಹಾಡುತ್ತಿದ್ದ ‘‘ಕಿನ್ನುರಿ ನುಡಿಸೋಣ ರಾಗಚಂದವೋ..’’ ಎಂದು ಆರಂಬಿಸಿ ‘‘ಎಲ್ಲೋ ಜೋಗಪ್ಪ ನಿನ್ನ ಅರಮನೇ..’’ ಎಂಬ ಹಾಡು ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ.
(ಅಂಕಣಕಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)






