‘ಟೋಕರ್ ಕೋಳಿ’ ಎಂಬ ಆಗಂತುಕರು!

ಪ್ರಮುಖವಾಗಿ ವಲಸೆ ಮತ್ತು ನೆಲೆಸುವಿಕೆಯ ಹಿನ್ನೆಲೆಯಲ್ಲಿ ನೋಡುವುದಾದರೆ ಟೋಕರ್‌ಕೋಳಿ ಸಮುದಾಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಿಂದ ಕರ್ನಾಟಕದ ಬೀದರ್, ಕಲಬುರಗಿ ಮತ್ತು ಇತರ ಜಿಲ್ಲೆಗಳಿಗೆ ವಲಸೆ ಬಂದಂತೆ ಕಾಣುತ್ತದೆ ಮತ್ತು ಮರಾಠಿ ಭಾಷಾ ಹಿನ್ನೆಲೆಯುಳ್ಳ ಕುಟುಂಬಗಳು ಕರ್ನಾಟಕದಲ್ಲಿ ಮರಾಠಿ ಭಾಷೆ, ಕನ್ನಡ ಭಾಷೆ ಮತ್ತು ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತುಕೊಂಡಂತೆ ಕಾಣುತ್ತದೆ.
ನಾನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದಾಗ ಆಯೋಗಕ್ಕೆ ಕಲಬುರಗಿ ಕಡೆಯ ಮಹಂತೇಶ್ ಪಾಟೀಲ್ ಎನ್ನುವ ಸದಸ್ಯರೊಬ್ಬರಿದ್ದರು. ಅವರು ಕಬ್ಬಲಿಗ ಸಮಾಜದವರಾಗಿದ್ದು ತಮ್ಮ ಸಮಾಜದ ಕುರಿತು ವಿವರವಾಗಿ ಮಾತನಾಡುತ್ತಿದ್ದರು. ಕಲಬುರಗಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಬ್ಬಲಿಗ ಸಮುದಾಯವನ್ನು ರಾಜ್ಯದ ವಿವಿಧೆಡೆ ಬೆಸ್ತ, ಅಂಬಿಗ, ಗಂಗಮತಸ್ತ, ಬೋಯಿ, ಖಾರ್ವಿ, ಸುಣ್ಣಗಾರ, ಮೀನುಗಾರ, ಗಂಗಾಪುತ್ರ, ಮೊಗವೀರ ಮುಂತಾಗಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಕಲಬುರಗಿಯಲ್ಲಿ ಕಬ್ಬಲಿಗರನ್ನು ‘ಕೋಳಿ’ ಎಂತಲೂ ಕರೆಯುತ್ತಾರೆ ಎಂದು ಹೇಳುತ್ತಿದ್ದರು. ಈ ಕಬ್ಬಲಿಗ ಸಮಾಜ ಮಾತ್ರ ಹಿಂದುಳಿದ ವರ್ಗಗಳ ಪ್ರವರ್ಗ ಒಂದರ ಪಟ್ಟಿಯಲ್ಲಿ ಬರುತ್ತಾರೆ.
ಒಮ್ಮೆ ಕಲಬುರಗಿಗೆ ಹೋದಾಗ ಒಂದಷ್ಟು ಮಂದಿ ಆಗಂತುಕರು ನಾನು ತಂಗಿದ್ದ ಅತಿಥಿ ಗೃಹಕ್ಕೆ ಬಂದು ತಾವು ‘ಟೋಕರ್ ಕೋಳಿ’ ಸಮುದಾಯದವರಾಗಿದ್ದು ತಮ್ಮನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲಾಗಿದ್ದು, ಜಾತಿ ಪ್ರಮಾಣಪತ್ರ ನೀಡುವಾಗ ಅಧಿಕಾರಿಗಳು ಕೋಳಿ, ಟೋಕರ್ ಕೋಳಿಗಳ ನಡುವೆ ನಮ್ಮ ಜಾತಿಯನ್ನು ಗುರುತಿಸಲು ಸ್ಪಷ್ಟತೆ ಇಲ್ಲದೆ ಜಾತಿಪ್ರಮಾಣ ಪತ್ರ ನೀಡಲು ಗೊಂದಲಗೊಳಿಸುತ್ತಿದ್ದಾರೆ ಎಂದು ಹೇಳಿದರು. ನಾನು ಮೊತ್ತಮೊದಲ ಸಲ ಟೋಕರ್ ಕೋಳಿ ಸಮುದಾಯದ ಹೆಸರು ಕೇಳಿಸಿಕೊಂಡೆ. ಇಲ್ಲಿಂದ ಆಚೆ ‘ಟೋಕರ್ ಕೋಳಿ’ ಸಮಾಜ ಕುರಿತು ತಿಳಿಯಲು ಉತ್ಸುಕನಾದೆ.
ಕರ್ನಾಟಕದ ‘ಕೋಳಿ’ ಸಮುದಾಯದ ವಿವಿಧ ಗುಂಪುಗಳನ್ನು ಒಂದೇ ಸಾಮಾಜಿಕ ವರ್ಗವೆಂದು ಪರಿಗಣಿಸುವುದು ಸರಿಯೇ ಎಂಬ ಪ್ರಶ್ನೆ ಮೂಡಿತು. ವಿಶೇಷವಾಗಿ ಟೋಕರ್ ಕೋಳಿ ಮತ್ತು ಸಾಮಾನ್ಯ ಕೋಳಿ ಎಂಬ ಗುರುತುಗಳ ನಡುವಿನ ಕಾನೂನುಬದ್ಧ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಅನಿಸಿತು. ಕರ್ನಾಟಕಕ್ಕೆ ಅನ್ವಯಿಸುವಂತೆ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ, ಭಾಗ VIರ ಕ್ರಮಸಂಖ್ಯೆ ೨೨ರಲ್ಲಿ ಟೋಕರ್ ಕೋಳಿಗೆ ಸಂಬಂಧಿಸಿದ ನಾಲ್ಕು ಹೆಸರುಗಳನ್ನು ಸೇರಿಸಲಾಗಿದೆ, ಅವೆಂದರೆ ಕೋಳಿ ದೋರ್, ಕೋಲ್ಚ, ಕೋಲ್ಘ ಮತ್ತು ಟೋಕ್ರೆ ಕೋಳಿ ಇವು ಪರಿಶಿಷ್ಟ ಪಂಗಡಗಳ ಅಧಿಸೂಚಿತ ಹೆಸರುಗಳಾಗಿವೆ. ಆದ್ದರಿಂದ ಸಾಮಾನ್ಯವಾಗಿ ಕೋಳಿ ಎಂದು ಗುರುತಿಸಿಕೊಂಡವರಿಗೆ ಟೋಕರ್ ಕೋಳಿ ಸಮುದಾಯದ ಎಸ್‌ಟಿ ಸ್ಥಾನಮಾನ ಅನ್ವಯಿಸುವುದಿಲ್ಲ ಎಂಬುದು ಸ್ಪಷ್ಟವಾಯಿತು.
ಇಷ್ಟಕ್ಕೂ ‘ಕೋಳಿ’ ಎಂಬ ಹೆಸರು ಸಮಾಜಕ್ಕೆ ಹೇಗೆ ಬಂತು? ಎಂಬುದು ಕುತೂಹಲಕರ. ಕನ್ನಡದಲ್ಲಿ ಕೋಳಿ ಅಂದರೆ ಚಿಕನ್, ಹೆಂಟೆ, ಹುಂಜ ಇತ್ಯಾದಿ. ಈ ಸಮಾಜಕ್ಕೂ ಕೋಳಿ ಎಂಬ ಪಕ್ಷಿಗೂ ಸಂಬಂಧವಿದೆಯೇ ಎಂಬ ಪ್ರಶ್ನೆಯೂ ಬರುತ್ತದೆ. ಆದರೆ ಮಾನವಶಾಸ್ತ್ರಜ್ಞರ ಪ್ರಕಾರ ‘ಕೋಳಿ’ ಎಂಬುದು ‘ಕೋಲ್’ ಮೂಲದಿಂದ ಬಂದಿದೆಯಂತೆ. ಮಹಾಭಾರತ, ರಾಮಾಯಣ ಕಾಲದಲ್ಲಿ ಭಾರತದಲ್ಲಿ ಇದ್ದ ಮೂಲ ಬುಡಕಟ್ಟೊಂದರ ಹೆಸರು ‘ಕೋಲ್’ ಅಥವಾ ‘ಕೋಲಿಯ’ ಎಂಬುದು. ಕೋಲ್ ಅಂದರೆ ಗುಡ್ಡ, ಕಾಡಿನಲ್ಲಿ ವಾಸಿಸುವವರು, ಬೇಟೆ ಆಡುವವರು. ಆ ಕೋಲ್ ಬುಡಕಟ್ಟಿನಿಂದಲೇ ಕೋಳಿ ಸಮುದಾಯದ ಹೆಸರು ಬಂತೆಂದು ಇತಿಹಾಸಕಾರರು ಹೇಳುತ್ತಾರೆ. ಬುದ್ಧನ ತಾಯಿ ಮಾಯಾದೇವಿ ಅಥವಾ ಮಾಯಾವತಿ ಕೂಡ ಕೋಲಿಯ ವಂಶದವಳು ಎಂದು ಬೌದ್ಧ ಗ್ರಂಥಗಳಲ್ಲಿ ಪ್ರಸ್ತಾಪಿಸಲಾಗಿದೆ. ಮತ್ತೊಂದು ಅರ್ಥದಲ್ಲಿ ಕೋಳಿ/ಕೊಳ್ಳ ಅಂದರೆ ಬಲೆ, ಕನ್ನಡ-ಮರಾಠಿಯಲ್ಲಿ ಕೊಳ್ಳ ಅಂದರೆ ಮೀನು ಹಿಡಿಯುವ ಬಲೆ, ಕೊಳ, ಕೆರೆ, ಹಳ್ಳ, ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯುವವರನ್ನು ‘ಕೋಳಿಯರು’ ಮತ್ತು ‘ಕೊಳ್ಳಿಗರು’ ಎಂದೂ ಕರೆಯುತ್ತಾರೆ. ಇವರು ಕಾಲ ಕ್ರಮೇಣ ಕೊಳ್ಳಿಗರು ಕೋಳಿ ಆದರು. ಇನ್ನು ಮರಾಠಿಯಲ್ಲಿ ಬಿದಿರಿನ ಬುಟ್ಟಿ ಹೆಣೆಯುವವರನ್ನು ಟೋಕರಿ, ಟೋಕರೆ ಎಂದು ಕರೆಯುತ್ತಾರೆ. ಹೀಗೆ ಬಿದಿರಿನ ಕೆಲಸ ಮಾಡುವವರನ್ನು ‘ಟೋಕರೆ ಕೋಳಿ’ ಎಂದು ಕರೆಯತೊಡಗಿದರು.
ಕರ್ನಾಟಕದಲ್ಲಿ ಟೋಕರ್ ಕೋಳಿ ಸಮುದಾಯದ ನೆಲೆ ಮತ್ತು ಜನಸಂಖ್ಯೆ ವಿಷಯದಲ್ಲಿ ಕರ್ನಾಟಕ ಸರಕಾರದ ಅಧಿಕೃತ ದಾಖಲೆ ಪ್ರಕಾರ ಮತ್ತು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ (Karnataka State Tribal Research Institute), ಮೈಸೂರು, ಸಿದ್ಧಪಡಿಸಿದ 2011ರ ಜನಗಣತಿ ಆಧಾರಿತ ಪರಿಶಿಷ್ಟ ಪಂಗಡಗಳ ಜನಸಂಖ್ಯಾ ವಿವರಗಳನ್ನು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ 21-08-2025ರಂದು ಮಂಡಿಸಲಾದ ಸರಕಾರಿ ದಾಖಲೆಯಲ್ಲಿ ಕೋಳಿ ದೋರ್, ಟೋಕ್ರೆ ಕೋಳಿ, ಕೋಲ್ಚ ಮತ್ತು ಕೋಲ್ಘ ಸಮುದಾಯಗಳನ್ನು ಒಟ್ಟಾಗಿ ಒಂದು ಗುಂಪಾಗಿ ದಾಖಲಿಸಲಾಗಿದೆ. 2011ರ ಜನಗಣತಿ ಆಧಾರದ ಪ್ರಕಾರ ರಾಜ್ಯದಲ್ಲಿ ಈ ಸಮುದಾಯದ ಜನಸಂಖ್ಯೆ 1,12,190.
ಈ ಸಮುದಾಯ ವಿರಳವಾಗಿ ಕಲಬುರಗಿ, ವಿಜಯಪುರ, ರಾಯಚೂರು, ಧಾರವಾಡ, ಹಾವೇರಿ, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಯಾದಗಿರಿಯಲ್ಲಿದೆ.
ಎಡ್ಗರ್ ಥರ್ಸ್ಟನ್, ಕೆ.ಎಸ್. ಸಿಂಗ್ ಮತ್ತು ಇತರ ಸಮಾಜಶಾಸ್ತ್ರಜ್ಞರ ಅಧ್ಯಯನಗಳು ಟೋಕರ್ ಕೋಳಿ ಸಮುದಾಯದ ಇತಿಹಾಸ ಮತ್ತು ಅಸ್ಮಿತೆಯನ್ನು ಅಧ್ಯಯನ ಮಾಡುವಾಗ ವಸಾಹತುಶಾಹಿ ಕಾಲದ ಜನಾಂಗಶಾಸ್ತ್ರೀಯ ದಾಖಲೆಗಳು (Ethnographic Records), ಭಾರತೀಯ ಮಾನವಶಾಸ್ತ್ರ ಸಮೀಕ್ಷೆಯ ಅಧ್ಯಯನಗಳು (Anthropological Survey of India) ಮತ್ತು ಆಧುನಿಕ ಬುಡಕಟ್ಟು ಸಂಶೋಧನೆಗಳನ್ನು ಒಟ್ಟಾಗಿ ಪರಿಶೀಲಿಸಿವೆ. ಇಲ್ಲಿ ಒಂದು ಮುಖ್ಯ ಎಚ್ಚರಿಕೆ ಇದೆ: ಕೋಳಿ, ಧೋರ್ ಕೋಳಿ, ಟೋಕರ್ ಕೋಳಿ, ಕೋಳಿ ಧೋರ್ ಮತ್ತು ಮಹಾದೇವ್ ಕೋಳಿ ಎಂಬ ಹೆಸರುಗಳನ್ನು ಎಲ್ಲ ಸಂದರ್ಭಗಳಲ್ಲೂ ಒಂದೇ ಸಮುದಾಯವೆಂದು ಪರಿಗಣಿಸಲಾಗುವುದಿಲ್ಲ. ಸಂಶೋಧಕರು ಬಳಸಿರುವ ಹೆಸರು, ಅಧ್ಯಯನದ ಭೌಗೋಳಿಕ ವ್ಯಾಪ್ತಿ ಮತ್ತು ಕಾಲಘಟ್ಟವನ್ನು ಕೂಡ ಇಲ್ಲಿ ಗಮನಿಸಬೇಕು ಎಂದು ಹೇಳಿದ್ದಾರೆ. ಎಂಥೋವೆನ್ ಅವರು ಕೋಳಿ ಸಮುದಾಯದ ಹಲವು ಉಪವಿಭಾಗಗಳನ್ನು ಕೂಡ ದಾಖಲಿಸಿದ್ದಾರೆ. ಅವುಗಳಲ್ಲಿ ಧೋರ್ ಕೋಳಿ, ಟೋಕರ್ ಕೋಳಿ, ಮಹದೇವ್ ಕೋಳಿ, ರಾಜ್ ಕೋಳಿ, ಸೋನ್ ಕೋಳಿ, ಮಹ್ಲಾರ್ ಕೋಳಿ ಮುಂತಾಗಿ ವಿವಿಧ ಹೆಸರುಗಳನ್ನು ಗುರುತಿಸಿದ್ದಾರೆ. ಅವರ ವಿವರಣೆಯಲ್ಲಿ ಧೋರ್ ಕೋಳಿ ಅಥವಾ ಟೋಕರ್ ಕೋಳಿಗಳನ್ನು ಉತ್ತರ ಕೊಂಕಣ ಪ್ರದೇಶದಲ್ಲಿ ಪ್ರಧಾನವಾಗಿ ವಾಸಿಸುವ ಗುಂಪಾಗಿ ಗುರುತಿಸಲಾಗಿದೆ. ಅವರೂ ಕೂಡ ಟೋಕರ್ ಎಂಬ ಹೆಸರನ್ನು ಬಿದಿರು ಕಡಿಯುವ ಅಥವಾ ಬಿದಿರಿನ ಕೆಲಸ ಮಾಡುವ ಸಾಂಪ್ರದಾಯಿಕ ವೃತ್ತಿಯೊಂದಿಗೆ ಗುರುತಿಸಿದ್ದಾರೆ.
ಮತ್ತೊಬ್ಬ ಸಮಾಜಶಾಸ್ತ್ರಜ್ಞ ಎನ್.ಕೆ. ಬೋಸ್‌ರವರ ‘Some Indian Tribes’(1972) ಕೃತಿಯಲ್ಲಿ ಬೋಸ್ ಅವರು ಕೋಳಿ ಸಮುದಾಯದ ವಿಭಿನ್ನ ಗುಂಪುಗಳ ಕುರಿತು ಚರ್ಚಿಸಿದ್ದಾರೆ. ಧೋರ್ ಕೋಳಿ, ಸೋನ್ ಕೋಳಿ ಮತ್ತು ರಾಜ್ ಕೋಳಿ ಎಂಬ ವಿಭಜನೆಗಳ ಉಲ್ಲೇಖಗಳು ಅವರ ಅಧ್ಯಯನಕ್ಕೆ ಸಂಬಂಧಿಸಿದಂತೆ ನಂತರದ ಸಂಶೋಧನಾ ಬರಹಗಳಲ್ಲಿ ಕಾಣುತ್ತವೆ. ಇದರಿಂದ ಕೋಳಿ ಎಂಬ ವಿಶಾಲ ಸಾಮಾಜಿಕ ಗುರುತಿನೊಳಗೆ ವೃತ್ತಿ, ಪ್ರಾದೇಶಿಕ ನೆಲೆ ಮತ್ತು ಸಾಮಾಜಿಕ ಆಚರಣೆಗಳ ಆಧಾರದ ಮೇಲೆ ವಿಭಿನ್ನ ಗುಂಪುಗಳು ಬೆಳೆದಿದ್ದವು ಎಂಬ ವಿಚಾರವು ತಿಳಿದುಬರುತ್ತದೆ.
ಪ್ರಮುಖವಾಗಿ ವಲಸೆ ಮತ್ತು ನೆಲೆಸುವಿಕೆಯ ಹಿನ್ನೆಲೆಯಲ್ಲಿ ನೋಡುವುದಾದರೆ ಈ ಸಮುದಾಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಿಂದ ಕರ್ನಾಟಕದ ಬೀದರ್, ಕಲಬುರಗಿ ಮತ್ತು ಇತರ ಜಿಲ್ಲೆಗಳಿಗೆ ವಲಸೆ ಬಂದಂತೆ ಕಾಣುತ್ತದೆ ಮತ್ತು ಮರಾಠಿ ಭಾಷಾ ಹಿನ್ನೆಲೆಯುಳ್ಳ ಕುಟುಂಬಗಳು ಕರ್ನಾಟಕದಲ್ಲಿ ಮರಾಠಿ ಭಾಷೆ ಮತ್ತು ಕನ್ನಡ ಭಾಷೆ ಮತ್ತು ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತುಕೊಂಡಂತೆ ಕಾಣುತ್ತದೆ. ಹೊಟ್ಟೆಪಾಡಿಗಾಗಿ ಬಿದಿರು ಆಧಾರಿತ ಸಾಂಪ್ರದಾಯಿಕ ಉದ್ಯೋಗಗಳಿಂದ ಆರಂಭವಾಗಿ ಈಚೆಗೆ ಕೃಷಿಕೂಲಿ, ನಗರ ಉದ್ಯೋಗ ಮತ್ತು ಇತರ ಜೀವನೋಪಾಯಗಳಿಗೆ ಈ ಸಮುದಾಯ ನೆಚ್ಚಿಕೊಂಡಿದೆ. ಒಟ್ಟಾರೆಯಾಗಿ ಸರಕಾರದ ಕಣ್ಣಲ್ಲಿ ಈ ಸಮುದಾಯಕ್ಕೆ ಅಸ್ತಿತ್ವವೇ ಇಲ್ಲ! ಯಾವ ಆಯೋಗಗಳೂ ಇವರನ್ನು ಗುರುತಿಸಿ ಇವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಕುರಿತು ಅಧ್ಯಯನ ಮಾಡಿಲ್ಲ. ನಮ್ಮ ‘ಸಭ್ಯ’ ಸಮಾಜಕ್ಕೆ ಆಗಂತುಕರಾಗಿಯೇ ಉಳಿದ ಇಂತಹ ಸಮಾಜಗಳನ್ನು ಗುರುತಿಸುವ ಕಾಲ ಇನ್ಯಾವಾಗ ಬರುತ್ತದೆ ಎಂಬುದೇ ಪ್ರಶ್ನೆ.
(ಅಂಕಣಕಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)






