ಮೈಸೂರು | ಬಿಹಾರದಲ್ಲಿರುವ ಬುದ್ಧಗಯಾ ಬೌದ್ಧರ ಆಡಳಿತಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಧರಣಿ

ಮೈಸೂರು, ಆ.13 : ಬುದ್ಧಗಯಾ ಮಹಾ ಬೋಧಿ ಮಹಾ ವಿಹಾರ ಮುಕ್ತಿ ಆಂದೋಲನ ಸಮಿತಿ ವತಿಯಿಂದ 1949ರ ಬುದ್ದಗಯಾ ಟೆಂಪಲ್ ಕಾಯ್ದೆ ರದ್ದತಿ ಮತ್ತು ಬಿಹಾರದಲ್ಲಿರುವ ಬುದ್ಧಗಯಾ ಮಹಾಬೋಧಿ ಮಹಾವಿಹಾರ ಸಂಪೂರ್ಣ ಬೌದ್ಧರ ಆಡಳಿತಕ್ಕೆ ಒಳಪಡಿಸಲು ಒತ್ತಾಯಿಸಿ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಬುಧವಾರ ಧರಣಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಭಾರತಾದ್ಯಂತ 84 ಸಾವಿರ ಬುದ್ಧಗಯಾ ನಾಶವಾಗಿದೆ. ಧರ್ಮಸ್ಥಳ, ತಿರುಪತಿ ಕೂಡ ಬುದ್ಧವಿಹಾರ. ಬಿಹಾರದಲ್ಲಿರುವ ಬುದ್ಧಗಯಾ ಬೌದ್ಧ ಧರ್ಮದ ಕೇಂದ್ರ ಸ್ಥಾನವಾಗಿತ್ತು. ಅದು ಬೌದ್ಧರ ಆಡಳಿತಕ್ಕೆ ಸೇರಬೇಕೆಂದು 140 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಬುದ್ಧಗಯಾ ಬಿಟ್ಟು ಕೊಡಬೇಕು ಎಂದು ಅವರು ಹೇಳಿದರು.
ಭಾರತ ಹಿಂದೂ ರಾಷ್ಟ್ರ ಆಗುವುದಿಲ್ಲ. ನಮ್ಮದು ಜಾತ್ಯಾತೀತ ರಾಷ್ಟ್ರ. ದೇಶದಲ್ಲಿ ಕಾಲ್ಪನಿಕ ದೇವರನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ಕನಸಿನಂತೆ ಇಲ್ಲಿ ಬುದ್ಧ ನೆಲೆಯನ್ನು ಸ್ಥಾಪಿಸುತ್ತೇವೆ. ಶಾಂತಿಯ ಮೂಲಕ ಹೋರಾಡುತ್ತೇವೆ. ಬುದ್ಧರ ಕೇಂದ್ರ ಸ್ಥಾನ ಬುದ್ಧಗಯಾ ಇದನ್ನು ಬೌದ್ಧರಿಗೆ ಬಿಟ್ಟುಕೊಡಬೇಕು ಎಂದು ಹೇಳಿದರು. ಧರಣಿಯಲ್ಲಿ ರಾಜ್ಯಾಧ್ಯಕ್ಷ ವೆಂಕಟ್ ಸ್ವಾಮಿ, ಇತರರು ಭಾಗವಹಿಸಿದ್ದರು.





