ʼಒಳಮೀಸಲಾತಿʼ ದಲಿತರ ಒಡಲಿನ ದೊಡ್ಡ ದೋಷ ತೋರಿಸಿತು : ಕೋಟಿಗಾನಹಳ್ಳಿ ರಾಮಯ್ಯ

ಮೈಸೂರು : ಒಳಮೀಸಲಾತಿಯ ಪ್ರಸಕ್ತ ವಿದ್ಯಮಾನಗಳು ದಲಿತರ ಒಡಲಿನಲ್ಲಿ ದೊಡ್ಡ ದೋಷ ತೋರಿಸಿತು. ಈ ಒಡಲು ಮಮಕಾರದಿಂದ ಕೂಡಿಲ್ಲ ಎಂಬುದನ್ನು ನಿರೂಪಿಸಿತು ಎಂದು ಸಾಹಿತಿ, ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಜೋಳಿಗೆ ಪ್ರಕಾಶನ, ಚಾಮರಾಜನಗರದ ಅಭ್ಯಾಸಿ ಟ್ರಸ್ಟ್ ಸಹಯೋಗದಲ್ಲಿ ರವಿವಾರ ಆಯೋಜಿಸಿದ್ದ ಮಂಜು ಕೋಡಿಉಗನೆ ಅವರ ‘ಬೋಧಿ ವೃಕ್ಷದ ಹಾಡು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಲಿತರು 50 ವರ್ಷ ಒಂದೇ ಛತ್ರಿಯಡಿ ಹೋರಾಡಿದರು. ಆದರೀಗ ಅದು ಬೇರೆ ದಿಕ್ಕಿನ ಕಡೆ ಚಲಿಸುತ್ತಿದೆ. ನಾವು ಇಷ್ಟು ದಿನ ಅಂದುಕೊಂಡಿರುವುದೆಲ್ಲವೂ ಭ್ರಮೆ ಎಂದು ಈಗ ಅನಿಸುತ್ತಿದೆ. ದಲಿತರದ್ದು ಕಲ್ಮಷವಿಲ್ಲದ ಒಡಲು ಅಲ್ಲ. ತಾಯಿ ರೀತಿಯ ಮಡಿಲೂ ಅಲ್ಲ. ಈ ಹಿಂದೆ ತುತ್ತು ಅನ್ನಕ್ಕೂ ಗತಿ ಇರಲಿಲ್ಲ. ಈಗ ಸಿಕ್ಕಿರುವ ತುತ್ತು ಅನ್ನವನ್ನು ಹಂಚಿಕೊಳ್ಳಲಾರದಂತಹ ಸ್ಥಿತಿ ತಲುಪಿದ್ದೇವೆ. ಇದು ದುರಂತವೇ ಸರಿ ಎಂದು ಕಳವಳ ವ್ಯಕ್ತಪಡಿಸಿದರು.
ಒಳಮೀಸಲಾತಿಯಲ್ಲಿ ಮೇಲುಗೈ ಸಾಧಿಸಿರುವ ಒಂದು ಸಮುದಾಯ ವಿಜಯೋತ್ಸವ ಆಚರಿಸಿ ಸಿಎಂ ಭಾವಚಿತ್ರಕ್ಕೆ ಕ್ಷೀರ ಅಭಿಷೇಕ ಮಾಡಿದೆ. ಇನ್ನೊಂದೆಡೆ, ಕೇವಲ 8 ಜನರಿರುವ ಜಾತಿಯ ಮಹಿಳೆಯೊಬ್ಬರು ಪ್ರಭುತ್ವ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಇವೆರಡು ಚಿತ್ರಗಳು ಕಾಡುತ್ತಿವೆ. ಇದೀಗ ನಾಲಿಗೆ ಸತ್ತು ಹೋಗಿದೆ. ಒಳಮೀಸಲಾತಿ ಬೆಳವಣಿಗೆಗಳು ದಲಿತರ ಒಡಲು ನಾವು ಅಂದುಕೊಂಡಂತಿಲ್ಲ. ಇಷ್ಟು ದಿನ ನಾವುಗಳೆಲ್ಲ ಭ್ರಮೆಯಲ್ಲಿದ್ದವು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಪತ್ನಿಗೆ ಬರೆದ ಪತ್ರದಲ್ಲಿ ‘ಬಲಗೈಯಲ್ಲಿ ಕಣ್ಣೀರು ಒರೆಸಿಕೊಂಡು, ಎಡಗೈಯಲ್ಲಿ ಬರೆಯುತ್ತಿವೆ’ ಎಂದು ಮಾರ್ಮಿಕವಾಗಿ ಹೇಳಿದ್ದರು. ಅದೇ ಸ್ಥಿತಿ ಇದೀಗ ನಿರ್ಮಾಣವಾಗಿದೆ. 50 ವರ್ಷ ದಲಿತ ಪ್ರಜ್ಞೆ, ಸಂವೇದನೆ ಈಗಿನ ಸಮಕಾಲಿನಲ್ಲಿ ಬೇರೆ ಏನ್ನನ್ನೋ ಬೇಡುತ್ತಿದೆ ಎಂದು ಹೇಳಿದರು.
ಸೃಜನಶೀಲ ಕೃತಿಯ ಪ್ರಾಣವೇ ಸಮಕಾಲಿನತೆ. ಅದುವೇ ಅಳತೆಗೋಲು. ಈ ಕೃತಿ ಸಮಕಾಲಿನವಾಗಿದೆ. ಸಹ ಅನೇಕ ಪ್ರಶ್ನೆಗಳನ್ನು ಹಾಕುತ್ತದೆ. ವಿವಿಧ ವಿಷಯಗಳ ಕುರಿತು ಒಳನೋಟವನ್ನೂ ಹೊಂದಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಬಿ.ಮಹೇಶ್ ಹರವೆ, ವಿಮರ್ಶಕ ವಿ.ಎಲ್.ನರಸಿಂಹಮೂರ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯ ಡಾ.ರವಿಕುಮಾರ್ ಬಾಗಿ, ಕೃತಿ ಲೇಖಕ ಮಂಜು ಕೋಡಿಉಗನೆ, ಅಭ್ಯಾಸಿ ಟ್ರಸ್‌ನ ಅಧ್ಯಕ್ಷ ಕಿರಣ್ ಗಿರ್ಗಿ ಹಾಜರಿದ್ದರು.







