ಬಾನು ಮುಷ್ತಾಕ್ ಬರುತ್ತಿರುವುದು ನಾಡಹಬ್ಬ ದಸರಾ ಉದ್ಘಾಟನೆಗೆ, ಬಿಜೆಪಿಯವರ ಮನೆ ಹಬ್ಬಕ್ಕಲ್ಲ: ಎಂ.ಲಕ್ಷ್ಮಣ್

ಮೈಸೂರು, ಆ.39 : ಬಾನು ಮುಷ್ತಾಕ್ ಅವರು ಬರುತ್ತಿರುವುದು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೇ ಹೊರತು ಬಿಜೆಪಿ ಅವರ ಮನೆ ಹಬ್ಬಕ್ಕಲ್ಲ, ಇದನ್ನು ವಿರೋಧಿಸುವವರರ ವಿರುದ್ಧ ನಾವು ಪ್ರತಿ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಎಚ್ಚರಿಕೆ ನೀಡಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಗೆ ಕಾಂಗ್ರೆಸ್ ಮುಖಂಡರುಗಳೊಂದಿಗೆ ತೆರಳಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿರುವ ಬೆಂಗಳೂರಿನ ಅರ್ಚಕ ಹಾಗೂ ಸಿಎಂ, ಡಿಸಿಎಂ ವಿರುದ್ಧ ಟೀಕೆ ಮಾಡಿ ಮಾಧ್ಯಮಗಳ ಮುಂದೆ ಬಂದು ಕೋಮು ಗಲಭೆ ಸೃಷ್ಟಿಯಾಗುವಂತ ಹೇಳಿಕೆಗಳನ್ನು ನೀಡುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ವಿರುದ್ಧ ಡಿಸಿಪಿ ಅವರಿಗೆ ದೂರು ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಾನು ಮುಷ್ತಾಕ್ ಬರುತ್ತಿರುವುದು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲು, ಅವರು ನವರಾತ್ರಿ ಪೂಜೆ ಮತ್ತು ಬಿಜೆಪಿ ಅವರ ಮನೆ ಹಬ್ಬ ಉದ್ಘಾಟನೆಗೆ ಬರುತ್ತಿಲ್ಲ. ಆದರೆ ಬಿಜೆಪಿಯ ಕೆಲವರು ಬಾನು ಮುಷ್ತಾಕ್ ಅವರನ್ನು ಟೀಕೆ ಮಾಡುತ್ತಿದ್ದಾರೆ. ನಾಡಹಬ್ಬ ಎಂಬ ಪರಿಜ್ಞಾನ ಇಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನ ಮಾನವನ್ನು ಹರಾಜು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣರಾಜ ಒಡೆಯರ್ ಒಂದು ಸಾರಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದನ್ನು ಸ್ವಾಗತಿಸುತ್ತಾರೆ. ನಂತರ ವಿರೋಧಿಸುತ್ತಾರೆ. ಒಬ್ಬ ರಾಜವಂಶಸ್ಥರಾದವರು ಬೆಳಿಗ್ಗೆ ಒಂದು ಸಂಜೆ ಒಂದು ಮಾತನಾಡುವುದಲ್ಲ ಎಂದು ಕಿಡಿಕಾರಿದರು.
ನಾಡಹಬ್ಬವನ್ನು ಮೈಸೂರಿನ ಜನತೆ ಸೇರಿದಂತೆ ರಾಜ್ಯ ಮತ್ತು ದೇಶದ ಜನ ಆಚರಣೆ ಮಾಡುತ್ತಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬಾನು ಮುಷ್ತಾಕ್ ದನದ ಮಾಂಸ ತಿನ್ನುತ್ತಾರೆ ಎಂದು ಹೇಳುತ್ತಾರೆ. ಅವರು ತಿನ್ನುವುದನ್ನು ಇವರು ನೋಡಿದ್ದರಾ? ವಿರೋಧ ಪಕ್ಷದ ನಾಯಕರಾದವರು ಕೋಮು ಕಿಡಿ ಹತ್ತಿಸುವುದಲ್ಲ, ಗೋ ಮಾಂಸವನ್ನು ಅತೀ ಹೆಚ್ಚು ರಫ್ತು ಮಾಡುತ್ತಿರುವ ಹತ್ತು ಜನರವ ಪಟ್ಟಿಯಲ್ಲಿ ಬಿಜೆಪಿ ಮುಖಂಡರುಗಳೇ ಇದ್ದಾರೆ. ಪ್ರಪಂಚಕ್ಕೆ ರಫ್ತು ಮಾಡುವ ಕಂಪನಿಗಳು ಇರುವುದೇ ಬಿಜೆಪಿ ಮುಖಂಡರ ಬಳಿ. ರಾತ್ರಿ ದನದ ಮಾಂಸ ತಿನ್ನುವುದು ಬೆಳಿಗ್ಗೆ ಕುಂಕುಮ ಇಟ್ಟುಕೊಂಡು ಶಾಲು ಹಾಕಿಕೊಂಡು ಬಂದು ಜನರ ಮುಂದೆ ಫೋಸ್ ಕೊಡುವ ಕಪಟ ನಾಟಕವಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಇದೇ ವೇಳೆ ಕಾಂಗ್ರೆಸ್ ಮುಖಂಡ ಬಿ.ಎಂ.ರಾಮು, ಮಾಧ್ತಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.







