ಮೈಸೂರು | ಐವರು ದಲಿತ ಯುವಕರ ಮೇಲೆ ಪೊಲೀಸರಿಂದ ಹಲ್ಲೆ; ಆರೋಪ

ಸಾಂದರ್ಭಿಕ ಚಿತ್ರ
ಮೈಸೂರು, ಸೆ.7 : ಕ್ಷುಲ್ಲಕ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದೇ ಮನೆಯ ಅಣ್ಣ ತಮ್ಮ, ಅಕ್ಕ ತಂಗಿಯ ಮಕ್ಕಳು ಮಾಡಿಕೊಂಡಿದ್ದ ಸಣ್ಣ ಗಲಾಟೆಗೆ ದೂರು ನೀಡದಿದ್ದರೂ ಟಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದ ದಲಿತ ಯುವಕರನ್ನು ಪೊಲೀಸ್ ಠಾಣೆಗೆ ಕರೆತಂದು ಪೊಲೀಸರು ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಸೆ.5 ರಂದು ಟಿ.ನರಸೀಪುರ ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ತುಂಬಲ ಗ್ರಾಮದ ದಲಿತ ಯುವಕರಾದ ಆನಂದ್, ಅರ್ಜುನ, ಪೃಥ್ವಿ, ಪ್ರವೀಣ್ ಮತ್ತು ಅಪ್ಪು ಎಂಬ ಐವರು ಯುವಕರಿಗೆ ಟಿ.ನರಸೀಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಧನಂಜಯ, ಸಬ್ಇನ್ಸ್ಪೆಕ್ಟರ್ ಜಗದೀಶ್ ದೂಳ್ ಶೆಟ್ಟಿ ಮತ್ತು ಇಬ್ಬರು ಪೊಲೀಸರು ಸೇರಿಕೊಂಡು ಥಳಿಸಿದ್ದಾರೆ. ಮನೆ ಕಟ್ಟುವ ವಿಚಾರಕ್ಕೆ ಒಂದೇ ಕುಟುಂಬದವರ ನಡುವೆ ಸಣ್ಣ ಗಲಾಟೆ ನಡೆದಿದೆ. ಈ ಸಂಬಂಧ ಪರಸ್ಪರರ ನಡುವೆ ಸಣ್ಣ ಹೊಡೆದಾಟವು ನಡೆದಿಲ್ಲ. ಆದರೆ ಪೊಲೀಸರು ಮಾತ್ರ ಐವರು ದಲಿತ ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಸಮಿತಿ ದೂರಿದೆ.
ಇದಕ್ಕೆ ನ್ಯಾಯ ಯಾರ ಬಳಿ ಕೇಳಬೇಕು ಎಂದು ಪ್ರಶ್ನಿಸಿರುವ ದಲಿತ ಸಂಘರ್ಷ ಸಮಿತಿ, ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿ, ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಐವರು ದಲಿತ ಯುವಕರ ಮೇಲೆ ಟಿ.ನರಸೀಪುರ ಠಾಣೆಯ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಇಬ್ಬರು ಪೊಲೀಸರು, ಓರ್ವ ಹೋಂ ಗಾರ್ಡ್ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ದಲಿತ ಸಂಘರ್ಷ ಸಮಿತಿ ಎಸ್ಪಿ ಅವರ ಗಮನಕ್ಕೆ ತಂದು ಡಿವೈಎಸ್ಪಿ ಅವರಿಗೆ ದೂರನ್ನು ನೀಡಿದೆ.
- ಆಲಗೂಡು ಶಿವಕುಮಾರ್, ಜಿಲ್ಲಾ ಸಂಚಾಲಕ, ದಸಂಸ.







