ಸಂವಿಧಾನ ಉಳಿದರೆ ಅದು ನಮ್ಮನ್ನು ಉಳಿಸುತ್ತದೆ : ಸಚಿವ ಡಾ.ಎಚ್.ಸಿ.ಮಹದೇವಪ್ಪ

ಮೈಸೂರು,ಸೆ.20 : ದಲಿತರು ಸಂವಿಧಾನ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಸಂವಿಧಾನವನ್ನು ಉಳಿಸಿದರೆ ಅದು ನಮ್ಮನ್ನು ಉಳಿಸುತ್ತದೆ. ಇಲ್ಲದಿದ್ದರೆ ಬೀದಿಗೆ ಬರಬೇಕಾಗುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಮಹಾ ನಗರ ಪಾಲಿಕೆ ವತಿಯಿಂದ ಶನಿವಾರ ನಗರದ ಪುರಭವನ ಆವರಣದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಪೀಠಿಕೆ ಶಿಲಾಫಲಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಸಂವಿಧಾನ ಮರೆಮಾಚುವ ಕೆಲಸ ನಡೆಯುತ್ತಿದೆ, ಆದರೆ ಅದು ಸಾಧ್ಯವಿಲ್ಲ. ಹೀಗಾಗಿ ದಲಿತರು ಅಸ್ಪೃಶ್ಯರು ಒಗ್ಗಟ್ಟಾಗಬೇಕು. ಶಿಕ್ಷಣ, ಸಂಘಟನೆ ಹೋರಾಟದ ಮೂಲಕ ಅಂಬೇಡ್ಕರ್ ವಾದ ಗಟ್ಟಿಗೊಳಿಸಬೇಕು, ಮನೆ ಮನೆಗೂ ಸಂವಿಧಾನ ಪೀಠಿಕೆ ತಲುಪಿದಾಗ ಮಾತ್ರ ಭಾರತೀಯರಾಗಿ ನಾವೆಲ್ಲಾ ಒಂದೇ ಎಂದು ಅರಿತು ಬಾಳಬಹುದು ಎಂದು ಹೇಳಿದರು.
ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಸಾಂಸ್ಕೃತಿಕ ನಗರದಲ್ಲಿ ಸಂವಿಧಾನ ಪೀಠಿಕೆ ಅಳವಡಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಏಕೆಂದರೆ ಸರ್ವ ಧರ್ಮ ಸಮಭಾವ ಈ ಸಂವಿಧಾನ ಪೀಠಿಕೆಯಲ್ಲಿದೆ , ಸಂವಿಧಾನದ ಪೀಠಿಕೆ ಈ ದೇಶದ ರಕ್ಷಾ ಕವಚ. ಇದಕ್ಕಾಗಿ ಎಲ್ಲ ಶಾಲಾ ಕಾಲೇಜುಗಳು ಹಾಸ್ಟೆಲ್‌ಗಳಲ್ಲಿ ಸಂವಿಧಾನ ಪೀಠಿಕೆ ಹಾಕಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್, ಮಂಜೇಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಗಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಮಾಜಿ ಮೇಯರ್ ಪುರುಷೋತ್ತಮ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.







