ಪ್ರತಾಪ್ ಸಿಂಹನ ಸೀಡಿ ಬಿಡುಗಡೆ : ಎಂ.ಲಕ್ಷ್ಮಣ್ ಎಚ್ಚರಿಕೆ

ಮೈಸೂರು,ಸೆ.21: ತನ್ನ ವಿರುದ್ಧ ನ್ಯಾಯಾಲಯದಿಂದ ತಂದಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಸವಾಲು ಎಸೆದಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮಾಜಿ ಸಂಸದನ ಸೀಡಿ ಜಾಲವನ್ನು ಒಂದೊಂದಾಗಿ ಎಪಿಸೋಡ್ ಮೂಲಕ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ಮಾತನಾಡುವ ವೇಳೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರ ಪತ್ನಿ ಮತ್ತು ಪುತ್ರಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಅವರು ನಗರದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಆವರಣದಲ್ಲಿ ತುರ್ತ ಸುದ್ದಿಗೋಷ್ಠಿ ನಡೆಸಿ, ನಾನು ರಾಜಕೀಯವಾಗಿ ಪ್ರತಾಪ್ ಸಿಂಹನ ಬಗ್ಗೆ ಮಾತನಾಡಿದ್ದೇನೆ. ಆತನ ಕರ್ಮಕಾಂಡದ ಸೀಡಿ ಇದೆ ಎಂದು ಹೇಳಿದ್ದೇನೆ. ಆತನ ಪತ್ನಿ, ಕುಟುಂಬದ ಬಗ್ಗೆ ನಾನು ಎಂದೂ ಮಾತನಾಡಿಲ್ಲ. ಪ್ರತಾಪ್ ಸಿಂಹನ ರಾಸಲೀಲೆಗಳ ಸೀಡಿ ಮೊಬೈಲ್‌ನಲ್ಲೆ ಇದೆ, ನಿಜವಾಗಲು ಯೋಗ್ಯನಾಗಿದ್ದರೆ, ನ್ಯಾಯಾಲಯದಲ್ಲಿನ ತಡೆಯಾಜ್ಞೆಯನ್ನು ತೆರವುಗೊಳಿಸಲಿ ನಂತರ ನೋಡೋಣ ಎಂದು ಸವಾಲು ಹಾಕಿದರು.
ಪ್ರತಾಪ್ ಸಿಂಹನ ಹೆಂಡತಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗೆ ಬರೆದಿರುವ ಲೆಟರ್ ನನ್ನ ಹತ್ತಿರ ಇದೆ. ಆತ ಅವನ ಪತ್ನಿಗೆ ಯಾವ ರೀತಿ ತೊಂದರೆ ಕೊಟ್ಟಿದ್ದೀಯ, ಕುಡಿದು ಬಂದು ಯಾವ ರೀತಿ ಅರೆ ಹುಚ್ಚನಾಗಿ ಆಡುತ್ತೀಯ, ನಿನಗೆ ಯಾವೆಲ್ಲ ಹೆಣ್ಣಿನ ಸಹವಾಸ ಇದೆ ಎಂಬ ಸಂಪೂರ್ಣ ಮಾಹಿತಿಯನ್ನು ನಿನ್ನ ಹೆಂಡತಿ ಬರೆದಿದ್ದಾರೆ. ಆ ಲೆಟರ್ ನೋಡಿ ಬಿ.ಎಲ್.ಸಂತೋಷ್ ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಿದರು.





