‘ಸ್ವಾತಂತ್ರ್ಯ ಹೋರಾಟಗಾರ ಮುಸ್ಲಿಮ್ ವೆಲ್ಲೂರಿ’ ಕೃತಿ ಲೋಕಾರ್ಪಣೆ

ಮೈಸೂರು : ಸ್ವಾತಂತ್ರ್ಯ ಹೋರಾಟಗಾರ, ವಿಧಾನ ಪರಿಷತ್ ಮಾಜಿ ಸದಸ್ಯ ದಿವಂಗತ ಮುಹಮ್ಮದ್ ಅಬ್ದುಲ್ ವಾಹಿದ್ ಖಾನ್ ಮುಸ್ಲಿಮ್ ವೆಲ್ಲೂರಿ ಅವರ ಕುರಿತು ಅವರ ಮೊಮ್ಮಗಳು ಪ್ರೊ.ಶಾಕಿರಾ ಖಾನಂ ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಸಂಪಾದಿಸಿರುವ ‘ಸ್ವಾತಂತ್ರ್ಯ ಹೋರಾಟಗಾರ ಮುಸ್ಲಿಮ್ ವೆಲ್ಲೂರಿ’ ಕೃತಿಯನ್ನು ರವಿವಾರ ಲೋಕಾರ್ಪಣೆ ಮಾಡಲಾಯಿತು.
ಶ್ರೀ ಶಿವರಾತ್ರಿಶ್ವರ ನಗರದಲ್ಲಿರುವ ಅಪ್ನಾಘರ್‌ನಲ್ಲಿ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಸ್ಲಿಮ್ ವೆಲ್ಲೂರಿ ಅವರ ಪುತ್ರ ಅಮೆರಿಕದಲ್ಲಿ ವಾಸವಿರುವ ಡಾ.ಟಿಪ್ಪು ಶಹೀದ್ ಖಾನ್ ಇತರ ಗಣ್ಯರ ಜತೆಗೂಡಿ ಕೃತಿಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಡಾ.ಆರ್.ಅಬ್ದುಲ್ ಹಮೀದ್ ಮಾತನಾಡಿ, ದಿವಂಗತ ಮುಸ್ಲಿಮ್ ವೆಲ್ಲೂರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ಮೂಲತಃ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದ ಗಂಜಾಂನಲ್ಲಿ ವಾಸವಿದ್ದ ಅವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಮೈಸೂರು ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು. ಸೆರೆವಾಸದಿಂದ ಬಿಡುಗಡೆಯಾದ ಬಳಿಕ, ಅನಾಥ ಮುಸ್ಲಿಮ್ ಮಕ್ಕಳಿಗೆ ನೆರವಾಗಲು ಅನಾಥಾಶ್ರಮ ಪ್ರಾರಂಭಿಸಿದರು. ಇಂದು ಸಾವಿರಾರು ಮಕ್ಕಳು ಅನ್ನ, ಅಕ್ಷರ, ಆಸರೆ ಪಡೆದಿರುವ ‘ಅಪ್ನಾಘರ್’ ಅವರು ಸ್ಥಾಪಿಸಿದ ಸಂಸ್ಥೆಯಾಗಿದೆ. 120 ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ಆಸರೆ ಪಡೆದು, ಸುಶಿಕ್ಷಿತರಾಗಿ ವಿವಿಧ ಹುದ್ದೆಗಳನ್ನು ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಹಿಂದೆ ಕಸ ತುಂಬುತ್ತಿದ್ದ ಮೂರು ಚಕ್ರದ ತಳ್ಳುವ ಗಾಡಿಯನ್ನು ತಳ್ಳಿಕೊಂಡು ಮನೆ ಮನೆಗೆ ತೆರಳಿ ಅಕ್ಕಿ, ಹಿಟ್ಟು ಪಡೆದು ಮಕ್ಕಳಿಗೆ ಅನ್ನಮಾಡಿ ಹಾಕುತ್ತಿದ್ದರು. ಕೊನೆಗೊಮ್ಮೆ ಮಕ್ಕಳಿಗೆ ಅನ್ನ ಹಾಕಲು ಹಣ ಸಾಲದಾಗ ತಾವು ಧರಿಸಿದ್ದ ಜುಬ್ಬಾವನ್ನು ಹರಾಜಿಗೆ ಹಾಕಿದರು. ಕೊಳ್ಳುವವರು ಹೆಚ್ಚಾದಾಗ, ಜುಬ್ಬಾವನ್ನು ಹರಿದು ತುಂಡು ತುಂಡು ಮಾಡಿ ಹರಾಜಿಗಿಟ್ಟು ಅದರಿಂದ ಬಂದ ಹಣದಿಂದ ಮಕ್ಕಳಿಗೆ ಅನ್ನ ಹಾಕಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಮೆಹರ್ ಮನ್ಸೂರ್, ಮುಹಮ್ಮದ್ ಅಲೀಮುಲ್ಲಾ, ಜಮೀಲ್ ಅಹ್ಮದ್ ಇತರರು ಉಪಸ್ಥಿತರಿದ್ದರು.
ಮುಸ್ಲಿಮ್ ವೆಲ್ಲೂರಿ ಅವರು ಮಹಾತ್ಮಾ ಗಾಂಧಿ, ಸುಭಾಶ್ ಚಂದ್ರಬೋಸ್ ಅವರಿಗೆ ನಿಕಟವರ್ತಿಯಾಗಿದ್ದರು. ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. 1947 ರಿಂದ 1953ರವರೆಗೆ ಅವರು ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕನ್ನಡ, ಉರ್ದು ಮತ್ತು ಇಂಗ್ಲಿಷ್ ಭಾಷೆಯಲ್ಲಿ ವಿವಿಧ ಲೇಖಕರು ಅವರ ಕುರಿತು ಪುಸ್ತಕ ಬರೆದಿದ್ದು, ಅದನ್ನು ಬಿಡುಗಡೆ ಮಾಡಲಾಗಿದೆ. ಮುಸ್ಲಿಮ್ ವೆಲ್ಲೂರಿ ಅವರ ಬಗ್ಗೆ ಕನ್ನಡಿಗರಿಗೆ ತಿಳಿಸುವಂತಾಗಬೇಕು.
ಪ್ರೊ.ಶಾಕಿರಾ ಖಾನಂ, ಸಂಪಾದಕಿ







