ಮಂಟೇಸ್ವಾಮಿ ಪ್ರಾಧಿಕಾರ ರಚನೆಯಾಗಬೇಕು : ಪುರುಷೋತ್ತಮ ಬಿಳಿಮಲೆ

ಮೈಸೂರು : ಜಾನಪದ ಕಲೆಗಳ ಕೇಂದ್ರಿಕೃತವಾದ ದಾಖಲೆ ರೂಪಿಸುವುದು ಇಂದಿನ ಅಗತ್ಯವಾಗಿದೆ. ಈ ದಾಖಲೆಯಲ್ಲಿ ಕಲಾವಿದರ ಕಲೆ, ಬದುಕು, ಜೀವನವನ್ನು ತಿಳಿಸಬೇಕು. ಜೊತೆಗೆ ಮಂಟೇಸ್ವಾಮಿ ಪರಂಪರೆ ಹಾಡು ಜಾಗತಿಕವಾಗಿ ಮನ್ನಣೆ ಪಡೆಯುತ್ತಿದ್ದು, ಮಂಟೇಸ್ವಾಮಿ ಪ್ರಾಧಿಕಾರ ರಚನೆಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ನಗರದ ಮಾನಸ ಗಂಗೋತ್ರಿಯ ಪ್ರಸಾರಾಂಗದ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಮೈಸೂರು ವಿವಿ ಪ್ರಸಾರಾಂಗದ ವತಿಯಿಂದ ನಡೆದ ‘ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು’ ಮತ್ತು ‘ನಾವು ಕೂಗುವಾ ಕೂಗು’ ಕೃತಿಗಳ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಂದಿನ ಪೀಳಿಗೆ ಅಂತರ್ಜಲದ ಬಳಕೆ ಹೆಚ್ಚು ಮಾಡಲಿದೆ. ಈ ನಿಟ್ಟಿನಲ್ಲಿ ನಾವು ಡಿಜಟಿಲೀಕರಣ ಮಾಡಿದರೆ ಪೀಳಿಗೆಯಿಂದ ಪೀಳಿಗೆ ತಲುಪಿಸಬಹುದು. ಪುಸ್ತಕಗಳ ದಾಖಲು ಮಾಡುವ ಜೊತೆಗೆ ಡಿಜಿಟಿಲೀಕರಣ ಕೂಡ ಮಾಡಬೇಕು. ಜಾನಪದ ವಿಶ್ವವಿದ್ಯಾನಿಲಯ, ಪ್ರಸಾರಾಂಗದಿಂದ ಈ ಕೆಲಸವಾಗಬೇಕು. ದಾಖಲೆ ನಿರ್ಮಿಸುವ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಯಕ್ಷಗಾನ ಮತ್ತು ಭೂತರಾಧನೆ ಬಹಳ ದೊಡ್ಡ ಕಲೆಗಳು. ಪ್ರಸ್ತುತ ಸಂದರ್ಭದಲ್ಲಿ ಮುಂದಿನ 28 ವರ್ಷಗಳಿಗೆ ಆಟವೂ ಬುಕ್ ಆಗಿದ್ದು, ಅಷ್ಟೊಂದು ಜನಪ್ರಿಯತೆ ಪಡೆದುಕೊಂಡಿದೆ. ಒಟ್ಟಾರೆ 750 ಭೂತಗಳಿದ್ದು, ಈ ಭೂತ ಕಥನಗಳ ಕಾವ್ಯವೂ ಇದೆ. ಆದರೆ, ಪ್ರತಿಯೊಂದು ಭೂತಕ್ಕೂ ಒಬ್ಬೊಬ್ಬರು ಕಲಾವಿದರಿದ್ದಾರೆ. ಭೂತಾರಾಧನೆಯು ಕಲಾವಿದನ ಆತ್ಮಚರಿತ್ರೆಯ ಕಾದಂಬರಿಯಾಗಿ ಅಥವಾ ಕೃತಿಯಾಗಿ ಪ್ರಕಟವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಮೈಸೂರು ವಿವಿಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ನೀಲಗಾರರ ಆತ್ಮಕಥನ ಪ್ರಕಟಿಸುವುದು ಮತ್ತು ಮಂಟೇಸ್ವಾಮಿ ಕಾವ್ಯವನ್ನು ಮುಂದಿನ ಪೀಳಿಗೆಗೆ ಪೂರ್ತಿ ಉಳಿಸಬೇಕು ಎನ್ನುವ ಯೋಜನೆಗಳನ್ನು ಕೈಗೊಂಡು ಕಲಾವಿದರು ಮತ್ತು ಲೇಖಕರನ್ನು ಒಟ್ಟಿಗೆ ಸೇರಿಸಲು ನಿರ್ಧರಿಸಿ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಅವರ ಬಳಿ ಹೋಗಿ ಅತಿಥಿ ಗೃಹ ನೀಡುವಂತೆ ಮನವಿ ಮಾಡಿದೆ. ನನ್ನ ಮನವಿಗೆ ಸಮ್ಮತಿಸಿದ ಅವರು ಅತಿಥಿ ಗೃಹದ ಜೊತೆಗೆ ಸಕಲ ಸೌಲಭ್ಯ ನೀಡಿದರು. ಹೀಗಾಗಿ ಅವರಿಗೆ ಸುತ್ತೂರು ಶ್ರೀಗಳಿಗೆ ಕೃತಜ್ಞತೆ ತಿಳಿಸುತ್ತೇನೆ. ಈ ಎರಡು ಪುಸ್ತಕಗಳು ಆಗಲು ಮೂಲ ಕಾರಣ ಶ್ರೀ ಶಿವರಾತ್ರೀಶ್ವರ ಸ್ವಾಮೀಜಿ.
-ಕೃಷ್ಣಮೂರ್ತಿ ಹನೂರು, ಕೃತಿಗಳ ಸಂಪಾದಕರು







