ಲೇಖಕ ಗಣೇಶ ಅಮೀನಗಡಗೆ ಎಂಆರ್‌ಎಂ ಪ್ರಕಾಶನ ಪ್ರಶಸ್ತಿ

ಮೈಸೂರು : ಪತ್ರಕರ್ತ, ಲೇಖಕ ಹಾಗೂ ಕವಿತಾ ಪ್ರಕಾಶನದ ಗಣೇಶ ಅಮೀನಗಡ ಅವರು ಮಂಡ್ಯದ ಎಂಆರ್‌ಎಂ ಪ್ರಕಾಶನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಎಂಆರ್‌ಎಂ ಸಾಹಿತ್ಯ ಪ್ರಶಸ್ತಿ ಪುರಸ್ಕಾರಕ್ಕೆ ಮಂಡ್ಯದ ಕವಿ ಕೆ.ಪಿ.ಮೃತ್ಯುಂಜಯ ಭಾಜನರಾಗಿದ್ದಾರೆ. ಈ ಇಬ್ಬರಿಗೂ ತಲಾ 10 ಸಾವಿರ ರೂ. ನಗದು, ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಗುವುದು ಎಂದು ಲೇಖಕ ಹಾಗೂ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಡ್ಯದ ಎಂಆರ್‌ಎಂ ಪ್ರಕಾಶನದ ಮೊದಲ ವಾರ್ಷಿಕೋತ್ಸವ ಅಂಗವಾಗಿ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರ ಪ್ರೌಢಶಾಲೆಯ ವಿಶ್ವಮಾನವ ವೇದಿಕೆಯಲ್ಲಿ ಜನವರಿ 12ರಂದು ಮಧ್ಯಾಹ್ನ 2 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.
ಇದೇ ಸಮಾರಂಭದಲ್ಲಿ ನಾದಾನಂದನಾಥ ಸ್ವಾಮೀಜಿ ರಚಿಸಿದ 'ಅವಧೂತ ಮಾದಪ್ಪ' ಹಾಗೂ ವೈದ್ಯಕೀಯ ವಿದ್ಯಾರ್ಥಿನಿ ಎಸ್.ಪಿ.ನಿಧಿ ಅವರು ಇಂಗ್ಲಿಷ್ ನಲ್ಲಿ ರಚಿಸಿದ 'ದಿ ಕಾಪಿ – ಎ ಫಾಟಲ್ ಪ್ಯಾಟನ್9' ಕಾದಂಬರಿ ಬಿಡುಗಡೆಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ನಾದಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಕೃತಿಗಳನ್ನು ಬಿಡುಗಡೆಗೊಳಿಸುವರು. ಯಾಚೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಕಥೆಗಾರ ಅದೀಬ್ ಅಖ್ತರ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುವರು. ನಿಧಿ ಅವರ ಕೃತಿ ಕುರಿತು ಪ್ರಕಾಶಕ ಹಾಗೂ ಮಂಡ್ಯ ವಿವಿಯ ಕನ್ನಡ ಅಧ್ಯಾಪಕ ಉಮೇಶ್ ದಡಮಹಳ್ಳಿ ಮಾತನಾಡುವರು. ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತ ಚನ್ನಾಜಮ್ಮ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕ ಹಾಗೂ ಕನ್ನಡ ಉಪನ್ಯಾಸಕ ಲೋಕೇಶ್ ಬೆಕ್ಕಳ, ಕವಯಿತ್ರಿ ಎಚ್. ಆರ್.ಕನ್ನಿಕಾ, ಬನ್ನೂರಿನ ಆಕಾಶ್ ಸ್ಟೀಲ್ಸ್ ಅಂಡ್ ಸಿಮೆಂಟ್ ಮಾಲಕ ಜಿ.ಸುರೇಶ್, ಕವಿ ಹಾಗೂ ಶಿಕ್ಷಕ ಕೊತ್ತತ್ತಿ ರಾಜು ಹಾಗೂ ನೇರಲಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ನೇರಲಕೆರ ಲೋಕೇಶ್ ಭಾಗವಹಿಸುವರು. ಎಂಆರ್ ಎಂ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಅಧ್ಯಕ್ಷತೆ ವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಕಾಶಕ ಹಾಗೂ ಕನ್ನಡ ಅಧ್ಯಾಪಕ ಉಮೇಶ್ ದಡಮಹಳ್ಳಿ ಪತ್ರಕರ್ತ ರುದ್ರಗೌಡ ಮುರಾಳ, ಲೇಖಕಿ ನಿಧಿ ಹೆತ್ತವರಾದ ಪ್ರವೀಣಕುಮಾರ್ ಹಾಗೂ ಪೂರ್ಣಿಮಾ ಹಾಜರಿದ್ದರು







