ಅಧ್ಯಾತ್ಮ ಧರ್ಮಗಳನ್ನು ದಾಟಿದ ಸಂಗತಿ : ಡಾ.ನಟರಾಜ್ ಬೂದಾಳ್

ಮೈಸೂರು : ಅಧ್ಯಾತ್ಮ ಧರ್ಮಗಳನ್ನು ದಾಟಿದ ಸಂಗತಿ. ಜಗತ್ತಿನಲ್ಲಿ ಪೊಳ್ಳು ತತ್ವಜ್ಞಾನಗಳು, ಸುಳ್ಳು ಧರ್ಮಗಳು ಸಾವಿರ ವರ್ಷಗಳಿಂದ ನಮ್ಮ ಬದುಕನ್ನು ಈಡಾಡುತ್ತ ಬಂದಿರುವ ಧಾರ್ಮಿಕತೆಗೆ ಪ್ರತಿಯಾಗಿ ಅಧ್ಯಾತ್ಮ ಬಳಸಬಹುದೇ ಎಂಬುದನ್ನು ಎಚ್ಚರದಿಂದ ತೀರ್ಮಾನಿಸಬೇಕಿದೆ ಎಂದು ವಿದ್ವಾಂಸ ಡಾ.ನಟರಾಜ್ ಬೂದಾಳ್ ಹೇಳಿದ್ದಾರೆ.
ಕಿರುರಂಗಮಂದಿರದಲ್ಲಿ ಬಹುರೂಪಿ ಬಾಬಾ ಸಾಹೇಬ್ ಸಮತೆಯೆಡೆಗೆ ನಡಿಗೆ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ರವಿವಾರ ಅಂಬೇಡ್ಕರ್ ಮತ್ತು ಆಧ್ಯಾತ್ಮಿಕ ವಿಮೋಚನೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಬುದ್ಧನನ್ನು ಯಾಕೆ ಸ್ವೀಕರಿಸಿದ್ದಾರೆ ಎಂದರೆ ಆತ ವಿಜ್ಞಾನಿ. ಲೋಕದ ಸಂಕಟಕ್ಕೆ ಸೂಕ್ತ ಪರಿಹಾರ ಸೂಚಿಸಿದ ವೈದ್ಯ. ಜಗತ್ತಿನ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿದ ಬಾಬಾ ಸಾಹೇಬರು ಯಾವ ಧರ್ಮಕ್ಕೆ ಸೇರದೇ ಇರಬಹುದಾಗಿತ್ತು. ಆದರೆ, ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡರು. ಜೆನ್ ಝಿ ಜನಾಂಗ ಯೂರೋಪಿನಲ್ಲಿ ಶೇ.65 ಯುವಕರು ತಾವು ಯಾವ ಧರ್ಮಕ್ಕೂ ಸೇರಿದವರಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಇದನ್ನು ಬಹಳ ಎಚ್ಚರದಿಂದ ಗಮನಿಸಬೇಕು ಎಂದು ಹೇಳಿದರು.
ಭಾರತದಲ್ಲಿ ಅದೆಷ್ಟು ಕಾಲನಿಗಳಿವೆ. ಬರೀ ದಲಿತ ಕಾಲನಿಗಳಲ್ಲ. ಭಾಷೆಯ, ಲಿಂಗದ ಕಾಲನಿಗಳಿವೆ. ಇಡೀ ದಕ್ಷಿಣ ಭಾರತಕ್ಕೆ ಉತ್ತರ ವೈದಿಕ ಭಾರತ ಕಾಲನಿ. ತುಳಿಯುವ ಜಾತಿ ಕೂಡ ಒಂದು ಕಾಲನಿ. ತುಳಿಸಿಕೊಳ್ಳುವ ಜಾತಿ ಕೂಡ ಒಂದು ಕಾಲನಿಯಾಗಿದೆ. ಅನೈಸರ್ಗಿಕ ಜೀವನ ಕ್ರಮ ಬಾಳುತ್ತಿದ್ದೇವೆ. ತುಳಿಯುವವನಿಗೂ ಅದೇ ಬಂಧನ. ತುಳಿಸಿಕೊಳ್ಳುವವನಿಗೂ ಅದೇ ಬಂಧನ. ತಾತ್ವಿಕತೆಯ ಜೀತ ಅತ್ಯಂತ ಹೀನಾಯವಾದದ್ದು. ದಲಿತರು ಮಾತ್ರವಲ್ಲ, ಬ್ರಾಹ್ಮಣರು ತಾತ್ವಿಕತೆಯ ಜೀತ ಮಾಡುತ್ತಿದ್ದಾರೆ ಎಂದರು.
ಬೈಲುಕುಪ್ಪೆಯ ಸೆರಾಜೆ ಬಿಕ್ಕು ತರಬೇತಿ ಕೇಂದ್ರದ ಬಂತೆ ತುಪ್ಟನ್ ಕಲ್ಡಾನ್ ವಿಷಯ ಮಂಡಿಸಿದರು.
ಅಂಬೇಡ್ಕರ್ ಒಂದೇ ಸಂವಿಧಾನ ಕೊಡಲಿಲ್ಲ. ಶಕ್ತಿಶಾಲಿಯಾದ ಸಾಂಸ್ಕೃತಿಕ ಸಂವಿಧಾನ ಕೊಟ್ಟರು. ಅದು ನಮ್ಮ ಬದುಕಿನ ನಡೆಗಳನ್ನು ನಿರ್ಣಯಿಸುತ್ತದೆ. ಅನೇಕ ದುಷ್ಟ ಸಮೀಕರಣಗಳು ನಡುವೆ ಇದ್ದೇವೆ. ಕೇಡಿನ ಜತೆಗೆ ಬಾಳುತ್ತಿದ್ದೇವೆ. ಪಾಂಥಿಕ ಆವರಣಕ್ಕೆ ಹೊದರೆ ಯಾವ ಧರ್ಮಕ್ಕೆ ಮೂಲ ಇರುವುದಿಲ್ಲ. ಅಧ್ಯಾತ್ಮ ಸ್ವರೂಪ ತೀರ್ಮಾನಿಸಿಕೊಂಡಿರುವ ಸಂಗತಿ ಅಲ್ಲ. ಅಧ್ಯಾತ್ಮ ವ್ಯಕ್ತಿಗತ ಬಿಡುಗಡೆಯ ಪ್ರಶ್ನೆಯಲ್ಲ. ಅಧ್ಯಾತ್ಮದ ಎದುರು ಧರ್ಮಗಳಿವೆ. ಜೀತದ ಬಿಡುಗಡೆಗೆ ಬೇಕಿರುವುದು ಅಧ್ಯಾತ್ಮ. ಪ್ರಜಾಸತ್ತೆಗಿಂತ ಮೀರಿದ ಧರ್ಮ ಬೇರೆ ಇಲ್ಲ.
- ಡಾ.ನಟರಾಜ್ ಬೂದಾಳ್, ವಿದ್ವಾಂಸರು







