ಪಾಲಿಕೆ ಮಳಿಗೆ ಬಾಡಿಗೆ ದರ ತಗ್ಗಿಸಲು ಸಚಿವ ಡಾ.ಯತೀಂದ್ರ ಸೂಚನೆ

ಬೆಂಗಳೂರು : ರಾಜ್ಯ ವಿವಿಧ ಮಹಾನಗರ ಪಾಲಿಕೆಯ ಮಳಿಗೆಗಳ ಬಾಡಿಗೆ ದರ ಹೆಚ್ಚಿಸಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಸುಮಾರು 10ಪಟ್ಟು ಹೆಚ್ಚು ದರವನ್ನು ಒಮ್ಮೆಗೆ ಹೆಚ್ಚಿಸಿದರೆ ತುಂಬಾ ಹೊರೆಯಾಗುತ್ತದೆ. ಹೀಗಾಗಿ, ಇದನ್ನು ಕಡಿಮೆ ಮಾಡುವ ಬಗ್ಗೆ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಮೈಸೂರು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದ ಅವರು, ಮೈಸೂರು ನಗರವು ಸ್ವಚ್ಛ ನಗರ ಎಂಬ ಖ್ಯಾತಿ ಗಳಿಸಿದೆ, ಈ ಮನ್ನಣೆ ಉಳಿಸಿಕೊಳ್ಳಲು ನಗರದ ಸ್ವಚ್ಛತೆಗೆ ಗಮನ ಹರಿಸಬೇಕು. ಯುಜಿಡಿ ಕಾಮಗಾರಿಗಳನ್ನು ಸಮರ್ಪಕವಾಗಿ ನಡೆಸಬೇಕು. ಕಸ ವಿಂಗಡಣೆ ಸರಿಯಾಗಿ ನಡೆಯಬೇಕು. ದಸರಾ ಸಂದರ್ಭದಲ್ಲಿ ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾರೆ, ಮೈಸೂರು ನಗರದ ಸ್ವಚ್ಚತೆ, ಅವರ ಗಮನ ಸೆಳೆಯುತ್ತದೆ ಎಂದರು.
ಕೆರೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ ಕೆರೆಗಳಿಗೆ ಕೊಳಚೆ ನೀರು ಬರುತ್ತಿದೆ ಎಂಬ ಮಾತುಗಳಿವೆ. ಕೊಳಚೆ ನೀರು ಕೆರೆಗಳಿಗೆ ಹೋಗದಂತೆ ಮಾರ್ಗ ಬದಲಿಸಬೇಕು ಅಥವಾ ನೀರನ್ನು ಸಂಸ್ಕರಿಸಬೇಕು. ಪೌರಕಾರ್ಮಿಕರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಿಗಬೇಕು. ಪೌರ ಕಾರ್ಮಿಕರ ಸಂಘದ ಸಭೆಯನ್ನು ಇತ್ತೀಚೆಗೆ ನಡೆಸಲಾಯಿತು. ಸಭೆಯಲ್ಲಿ ಪೌರ ಕಾರ್ಮಿಕರ ಹಲವಾರು ಸಮಸ್ಯೆಗಳನ್ನು ತಿಳಿಸಿದ್ದಾರೆ. ಶೇ.24.1ರ ಅನುದಾನದಲ್ಲಿ ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡಬೇಕು. ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅವರ ಶಾಲಾ ಪ್ರವೇಶ ಶುಲ್ಕ ಮರು ಪಾವತಿಗೆ ಉಪಯೋಗಿಸಬೇಕು ಎಂದು ತಿಳಿಸಿದರು.






