ʼಕಂಬಳʼ ಅಂತಿಮ ತೀರ್ಮಾನವಾಗಿಲ್ಲ: ಸಚಿವ ಯತೀಂದ್ರ

ಮೈಸೂರು : ದಸರಾದಲ್ಲಿ ಕಂಬಳ ಆಯೋಜನೆಗೆ ಅಂತಿಮ ತೀರ್ಮಾನ ಮಾಡಿಲ್ಲ ಎಂದು ಮೈಸೂರು ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರೈತ ಸಂಘ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ನಿಯೋಗದವರೊಂದಿಗೆ ಬುಧವಾರ ಕಂಬಳ ಆಯೋಜನೆ ಸಂಬಂಧ ಅಭಿಪ್ರಾಯಗಳನ್ನು ಪಡೆದ ಅವರು, ನಿಮ್ಮೆಲ್ಲರ ಭಾವನೆಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರುವುದಾಗಿ ಹೇಳಿದರು.
ಸಭೆಯ ಆರಂಭದಲ್ಲಿ ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಅವರು, ದಸರಾದಲ್ಲಿ ಕಂಬಳ ಆಯೋಜನೆಗೆ ಅವಕಾಶ ಕೊಡಬಾರದು. ಈ ಬಾರಿಯ ಮಳೆ ಕೊರತೆ ಇದೆ. ಜುಲೈ ತಿಂಗಳಲ್ಲಿ ಮಳೆ ಬಂದಿಲ್ಲ. ಬರಗಾಲದ ಪರಿಸ್ಥಿತಿ ರಾಜ್ಯವನ್ನು ಆವರಿಸಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಕಂಬಳ ಆಯೋಜನೆಯಿಂದ ದಸರಾದ ಖ್ಯಾತಿ ಕುಂದುತ್ತದೆ. ಪರಿಸರ ನಾಶದ ಜತೆಗೆ ಸಂಚಾರ ದಟ್ಟಣೆ, ವಾಯು ಮಾಲಿನ್ಯ, ಮರ ಕಟಾವು ಮಾಡಬೇಕಾಗುತ್ತದೆ. ದಸರಾದಲ್ಲಿ ಈಗಿರುವ ಕಾರ್ಯಕ್ರಮಗಳನ್ನು ಅಚ್ಚುಕಟ್ಟುತನದಿಂದ ಆಯೋಜಿಸಬೇಕು. ಯಾವುದೇ ಕಾರಣಕ್ಕೂ ಹೊಸದಾದ ಕಾರ್ಯಕ್ರಮಗಳನ್ನು ಪರಿಚಯಿಸಬಾರದು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪಾರಂಪರಿಕ ತಜ್ಞ ಪ್ರೊ.ಎನ್.ಎಸ್ ರಂಗರಾಜು, ಪ್ರೊ. ಕಾಳಚನ್ನೇಗೌಡ, ಪ್ರೊ.ಎಂ.ಆರ್ ಜನಾರ್ದನ, ಬಾನು ಪ್ರಶಾಂತ್, ಮ ಗು ಸದಾನಂದಯ್ಯ, ಪ್ರಭಾ ನಂದೀಶ್, ಭಾಗ್ಯ ಶಂಕರ್, ಅಂಜನಾ, ಗಂಟಯ್ಯ, ಗುರುಸ್ವಾಮಿ, ಗಣೇಶ್ ಭಾಗವಹಿಸಿದ್ದರು.






