ಮೈಸೂರು ಜಿಲ್ಲೆಯಲ್ಲಿ ಸುಗಮವಾಗಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ

ಮೈಸೂರು : ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ರವಿವಾರ ಸುಗಮವಾಗಿ ನಡೆದಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿತ್ತು.
ಇತ್ತೀಚೆಗೆ ಪರೀಕ್ಷ ಆಕ್ರಮಗಳ ಬಗ್ಗೆ ವ್ಯಾಪಕ ಹೋರಾಟ ನಡೆದ ಹಿನ್ನಲೆಯಲ್ಲಿ ಯಾವುದೇ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಮೈಸೂರು ಜಿಲ್ಲೆಯಲ್ಲಿ ಒಟ್ಟು 22,054 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 47 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಜಿಲ್ಲೆಯ 47 ಕೇಂದ್ರಗಳಲ್ಲಿ 43 ಕೇಂದ್ರಗಳು ಮೈಸೂರು ನಗರದಲ್ಲಿ ಹಾಗೂ 4 ಕೇಂದ್ರಗಳು ನಂಜನಗೂಡಿನಲ್ಲಿ ಕಾರ್ಯನಿರ್ವಹಿಸಿದವು. ಕರ್ನಾಟಕ ಹುದ್ದೆಗಳಿಗೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ, ಕಲ್ಯಾಣ ಕರ್ನಾಟಕ ಹುದ್ದೆಗಳಿಗಾಗಿ ಮಧ್ಯಾಹ್ನ 2.30ರಿಂದ ಸಂಜೆ 4 ಗಂಟೆಯವರೆಗೆ ಪರೀಕ್ಷೆ ನಡೆಯಿತು. ಪರೀಕ್ಷೆಯಲ್ಲಿ 100 ಅಂಕಗಳ ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆಗೆ 90 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಪರೀಕ್ಷೆಯು ಸುಸೂತ್ರವಾಗಿ ನಡೆಯುವಂತೆ ಮೈಸೂರು ನಗರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು. ನಗರದ 43 ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅಭ್ಯರ್ಥಿಗಳನ್ನು ಸಂಪೂರ್ಣ ತಪಾಸಣೆ ಹಾಗೂ ದೇಹ ತಪಾಸಣೆ ನಡೆಸಿದ ಬಳಿಕವೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ನೀಡಲಾಯಿತು. ಇದೇ ವೇಳೆ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ನಿಗಾ ಹಾಗೂ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾದ ಕೇಂದ್ರ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮೂಲಕ ಪರೀಕ್ಷೆಯ ಮೇಲ್ವಿಚಾರಣೆ ನಡೆಸಲಾಯಿತು.




