ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ನಿಧನ
ಸಿಎಂ ಡಿ.ಕೆ.ಶಿವಕುಮಾರ್ ಸಹಿತ ಹಲವರ ಸಂತಾಪ

ಮೈಸೂರು : ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್(77) ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ ಡಾ.ಅನಸೂಯಾ ಗೋಪಾಲ್, ಪುತ್ರಿ ಮಾಲಾ, ಅಳಿಯ ಭವಾನಿಶಂಕರ್, ಮೊಮ್ಮಗಳು ಆದ್ಯಾ ಅವರನ್ನು ಅಗಲಿದ್ದಾರೆ. ಮಡ್ಡೀಕೆರೆ ಗೋಪಾಲ್ ಅವರ ಪಾರ್ಥಿವ ಶರೀರವನ್ನು ಉದಯಗಿರಿಯ ಅಂಚೆ ಕಚೇರಿ ಸಮೀಪವಿರುವ (ಪಿ.ಎಫ್. ಆಫೀಸ್ ರಸ್ತೆ) ಅವರ ನಿವಾಸದಲ್ಲಿ ಮಧ್ಯಾಹ್ನ 1:30ರವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 2ರಿಂದ 3ರವರೆಗೆ ವಿಜಯನಗರ ಮೊದಲ ಹಂತದ ಜಿಲ್ಲಾ ಕನ್ನಡ ಸಾಹಿತ್ಯ ಭವನಕ್ಕೆ ತಂದು ಕನ್ನಡ ತೇರಿನ ಗೌರವ ನೀಡಲಾಯಿತು. ಸಂಜೆ 4ರ ಸುಮಾರಿಗೆ ಚಾಮುಂಡಿಬೆಟ್ಟದ ಪಾದದ ಸಮೀಪದ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸುವ ಮೂಲಕ ಪಂಚಭೂತಗಳಲ್ಲಿ ಲೀನವಾದರು.
ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ವಾಟಾಳು ಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ, ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಶಾಸಕ ಶ್ರೀವತ್ಸ, ಕೆ.ಹರೀಶ್ ಗೌಡ ಮುಂತಾದವರು ಸಂತಾಪ ಸೂಚಿಸಿದ್ದಾರೆ.




