ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ಬೀರಿಹುಂಡಿ ಬಸವಣ್ಣ ನೇಮಕ

ಮೈಸೂರು : ನಗರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆರ್.ಮೂರ್ತಿ ಅವರನ್ನು ಮುಂದುವರಿಸಿದ್ದು, ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ಬೀರಿಹುಂಡಿ ಬಸವಣ್ಣ ಅವರನ್ನು ನೇಮಕ ಮಾಡಿದೆ.
ಸಂಘಟನಾ ಸೃಜನ ಅಭಿಯಾನದಡಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲಾಗಿತ್ತು ಮತ್ತು ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಗುರುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನೂತನ ಜಿಲ್ಲಾಧ್ಯಕ್ಷರ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಕಳೆದ 9 ವರ್ಷಗಳಿಂದ ಆರ್. ಮೂರ್ತಿ ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಸ್ಥಾನಕ್ಕೆ ಸ್ಪರ್ಧೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಅವಧಿಗೆ ಅವರಿಗೆ ಅವಕಾಶ ನೀಡಲಾಗಿದೆ.
ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿರುವ ಬೀರಿಹುಂಡಿ ಬಸವಣ್ಣ ಅವರಿಗೆ ಪಕ್ಷದ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಅವರು ಹಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಈಚೆಗೆ ಕಾಂಗ್ರೆಸ್ ವಿವಿಧ ಘಟಕಗಳ ಮುಖ್ಯಸ್ಥರು ಬೀರಿಹುಂಡಿ ಬಸವಣ್ಣ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿ ಸಭೆ ನಡೆಸಿದ್ದರು. ಹೊರಗಿನಿಂದ ಬಂದವರಿಗೆ ಜವಾಬ್ದಾರಿ ನೀಡಬಾರದೆಂದು ಹೈಕಮಾಂಡ್‌ಗೆ ಒತ್ತಾಯಿಸಿದ್ದರು.
ಕಳೆದ 14 ವರ್ಷಗಳಿಂದ ಡಾ.ಬಿ.ಜೆ.ವಿಜಯ್‌ಕುಮಾರ್ ಗ್ರಾಮಾಂತರ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.






