ಕಬಿನಿಯಿಂದ ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು

ಮೈಸೂರು : ಕಬಿನಿ ಜಲಾಶಯ ತುಂಬಿದ್ದು ಶನಿವಾರ ರಾತ್ರಿ 12 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಯಬಿಡಲಾಗಿದೆ.
ಕಬಿನಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಾವೇರಿ ನಿರ್ವಹಣ ಮಂಡಳಿ ಆದೇಶಕ್ಕಿಂತ ಅಧಿಕ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಇದರಿಂದ ರಾಜ್ಯ ಸರಕಾರ ಸಂಕಷ್ಟ ಸೂತ್ರದಿಂದ ಪಾರಾದಂತಾಗಿದೆ.
ಕಬಿನಿ ಜಲಾಶಯದ ನೀರಿ ಮಟ್ಟ ಗರಿಷ್ಟ 2,284 ಅಡಿಗಳಷ್ಟಿದ್ದು, ಇಂದಿನ ಮಟ್ಟ 2,284.43 ಅಡಿಗಳಷ್ಟಿದೆ. ಗರಿಷ್ಟ 19.52 ಟಿ.ಎಂ.ಸಿ ಇದ್ದು ಶನಿವಾರ 17.89 ಟಿ.ಎಂ.ಸಿ ನೀರು ತುಂಬಿದೆ. 19,037 ಕ್ಯೂಸೆಕ್ ಒಳ ಹರಿವಿದ್ದು, 12,000 ಕ್ಯೂಸೆಕ್ ಹೊರ ಹರಿವು ಬಿಡಲಾಗುತ್ತಿದೆ.
ಈ ಸಂಬಂಧ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕಬಿನಿ ಜಲಾಶಯಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಬಿನಿ ಡ್ಯಾಂ ತುಂಬಿ ಹೋಗಿದೆ. ಹೀಗಾಗಿ ನೀರನ್ನು ಹೊರ ಬಿಡಲಾಗುತ್ತಿದೆ. ನಾಲೆಗಳಿಗೆ ಹರಿಯುವುದಲ್ಲದೇ ತಮಿಳುನಾಡಿಗೂ ನೀರು ಹೋಗಲಿದೆ. ತಮಿಳುನಾಡಿನವರು ಕೇಳುತ್ತಿದ್ದಕ್ಕಿಂತ ಹೆಚ್ಚಿನ ನೀರು ಹರಿದು ಹೋಗಲಿದೆ. ಶನಿವಾರ 12 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ರವಿವಾರ 20 ಸಾವಿರ ಕ್ಯೂಸೆಕ್ ನೀರನ್ನು ಬಿಡುತ್ತಾರೆ ಎಂದು ಹೇಳಿದರು.




