ಮೈಸೂರು | ಪ್ರಶ್ನೆಯಿಂದ ಸಿಡಿಮಿಡಿಗೊಂಡು ಪತ್ರಕರ್ತನ ಬಗ್ಗೆ ಕೆಟ್ಟದಾಗಿ ಮಾತಾಡಿದ ಪ್ರತಾಪ್ ಸಿಂಹ

ಮೈಸೂರು: ಮಾಧ್ಯಮ ಹೇಳಿಕೆ ನೀಡುವ ವೇಳೆ ಪತ್ರಕರ್ತನ ಪ್ರಶ್ನೆಯಿಂದ ಇರುಸುಮುರುಸುಗೊಂಡ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹಿರಿಯ ಪತ್ರಕರ್ತರೊಬ್ಬರ ಹೆಸರನ್ನು ಉಲ್ಲೇಖಿಸಿ ಅಪಮಾನಿಸಿದ ಘಟನೆ ಮಂಗಳವಾರ ನಡೆದಿದೆ.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ' ಚಾಮುಂಡಿ ಚಲೋ' ಬೆಂಬಲಿಸಿ ಚಾಮುಂಡಿ ಬೆಟ್ಟಕ್ಕೆ ತೆರಳಲು ಆಗಮಿಸಿದ ಪ್ರತಾಪ್ ಸಿಂಹರನ್ನು ಕುರುಬಾರಹಳ್ಳಿ ವೃತ್ತದಲ್ಲೆ ಪೊಲೀಸರು ತಡೆದರು. ಈ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
"ನಿಮಗೆ ಮಾಡಲು ಕೆಲಸವಿಲ್ಲ, ನಿಮ್ಮನ್ನು ಬಿಜೆಪಿ ಕಿತ್ತು ಬಿಸಾಕಿದೆ. ಅಸ್ತಿತ್ವ ಉಳಿಸಿಕೊಳ್ಳಲು ಹೀಗೆಲ್ಲಾ ಮಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದರಲ್ಲ? ಈ ಬಗ್ಗೆ ಏನಂತೀರಿ ಎಂದು 'ವಾರ್ತಾಭಾರತಿ' ಮೈಸೂರು ಜಿಲ್ಲಾ ವರದಿಗಾರ ಸತೀಶ್ ಕುಮಾರ್ ಎನ್.ಎಸ್. ಗಮನಸೆಳೆದರು. ಇದರಿಂದ ಸಿಡಿಮಿಡಿಗೊಂಡ ಪ್ರತಾಪ್ ಸಿಂಹ, "ಇಲ್ಲಿ ಯಾವನೊ ಒಬ್ಬ ಪತ್ರಕರ್ತನಿದ್ದಾನೆ ಸತೀಶ ಅಂತ. ಅವನ ಮಾತಿಗೆ ಮೂರು ಕಾಸಿನ ಬೆಲೆ ಕೊಡಲ್ಲ, ಅವನ ಪ್ರಶ್ನೆಯನ್ನು ನಾನು ತೆಗೆದುಕೊಳ್ಳಲ್ಲ" ಎಂದು ಉದ್ಧಟತನದಿಂದ ಮಾತನಾಡಿ ಅಪಮಾನಿಸಿದ್ದಾರೆ.
ಮಾಜಿ ಪತ್ರಕರ್ತರೂ ಆಗಿರುವ ಮಾಜಿ ಸಂಸದ ಪ್ರತಾಪ್ ಸಿಂಹರ ಈ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಪತ್ರಕರ್ತರ ಸಂಘ ಖಂಡನೆ:
ʼವಾರ್ತಾಭಾರತಿʼ ಮೈಸೂರು ಜಿಲ್ಲಾ ವರದಿಗಾರ ಸತೀಶ್ ಕುಮಾರ್ ಎನ್.ಎಸ್. ಅವರಿಗೆ ವೈಯಕ್ತಿಕವಾಗಿ ಅವಮಾನ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಖಂಡಿಸಿದೆ.
ಈ ಸಂಬಂಧ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ʼವಾರ್ತಾಭಾರತಿʼ ಜಿಲ್ಲಾ ವರದಿಗಾರ ಸತೀಶ್ ಕುಮಾರ್ ಅವರನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅವಮಾನಿಸುವ ಮೂಲಕ ಇಡೀ ಮೈಸೂರು ಜಿಲ್ಲಾ ಪತ್ರಕರ್ತರನ್ನೇ ಅವಮಾನಿಸಿದ್ದಾರೆ. ಇವರ ಹೇಳಿಕೆಯನ್ನು ಸಂಘ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಮಾತನಾಡಿ, ಪತ್ರಕರ್ತ ಪ್ರಶ್ನೆಗೆ ಉತ್ತರಿಸಲಾಗದೆ ಮಾಜಿ ಸಂಸದ ಪ್ರತಾಪ್ ಸಿಂಹ ವೈಯಕ್ತಿಕವಾಗಿ ನಿಂದನೆ ಮಾಡಿರುವುದನ್ನು ಜಿಲ್ಲಾ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ. ಓರ್ವ ಮಾಜಿ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ಮತ್ತೊಬ್ಬ ಪತ್ರಕರ್ತರ ಬಗ್ಗೆ ಈ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.







