ಎಸ್ಸೆಸ್ಸೆಫ್ 'ಸೌಹಾರ್ದ ನಡಿಗೆ'ಗೆ ಜೂ.22ರಂದು ಮೈಸೂರಿನಲ್ಲಿ ಚಾಲನೆ

ಮೈಸೂರು: ದೇಶದೆಲ್ಲೆಡೆ ಕೋಮುದ್ವೇಷ ಹರಡುವ ಕೆಲಸ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿರುವ ಈ ಸನ್ನಿವೇಶದಲ್ಲಿ ನಾಡಿನ ಸೌಹಾರ್ದ ಪರಂಪರೆಯನ್ನು ಉಳಿಸಲು ಎಸ್ಸೆಸ್ಸೆಫ್ ವತಿಯಿಂದ 'ಮನುಷ್ಯ ಮನಸ್ಸುಗಳನ್ನು ಪೋಣಿಸುವ' ಎಂಬ ಧ್ಯೇಯದೊಂದಿಗೆ ರಾಜ್ಯದ ಇಪ್ಪತ್ತು ಜಿಲ್ಲಾ ಕೇಂದ್ರಗಳಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಮುಖ ಸ್ವಾಮೀಜಿಗಳು, ಕ್ರೈಸ್ತ ಧರ್ಮಗುರುಗಳು ಹಾಗೂ ಮುಸ್ಲಿಮ್ ಧರ್ಮಗುರುಗಳನ್ನು ಒಳಗೊಂಡು ನಾಡಿನ ಭಾವೈಕ್ಯ ಬಯಸುವ ಎಲ್ಲರೂ ಒಟ್ಟಾಗಿ ಕೈಕೈ ಹಿಡಿದುಕೊಂಡು ಪ್ರಮುಖ ಪಟ್ಟಣಗಳ ಮುಖ್ಯ ರಸ್ತೆಯಲ್ಲಿ ನಡೆಯುವುದು, ಕೊನೆಗೆ ಎಲ್ಲಾ ಧರ್ಮಗುರುಗಳ ಸೌಹಾರ್ದ ಸಂದೇಶ ದೊಂದಿಗೆ ಕಾರ್ಯಕ್ರಮ ಸಮಾಪನಗೊಳ್ಳಲಿದೆ.
ಯಾವುದೇ ಧ್ವಜಗಳಿಲ್ಲದೆ, ಘೋಷಣೆ ಕೂಗದೆ ಮೌನವಾಗಿ ಭಾವೈಕ್ಯ ಸಂದೇಶ ಸಾರುವ ಈ ಸೌಹಾರ್ದ ನಡಿಗೆಗೆ ಜೂನ್ 22 ರಂದು ಪೂರ್ವಾಹ್ನ 11 ಗಂಟೆಗೆ ಮೈಸೂರು ಪಟ್ಟಣದಲ್ಲಿ ಚಾಲನೆ ನೀಡಲಿದ್ದು, ರಾಜ್ಯದ 20 ಪ್ರಮುಖ ಜಿಲ್ಲೆಗಳಿಗೆ ತೆರಳಿ ಕೊನೆಗೆ ಜುಲೈ 4ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ ಎಂದು ಎಸ್ಸೆಸ್ಸೆಫ್ ಪ್ರಕಟನೆಯಲ್ಲಿ ತಿಳಿಸಿದೆ.





