ನಾಗರಹೊಳೆ | ಕರಡಿಕಲ್ಲು ಹಾಡಿಯ 6 ಗುಡಿಸಲು ಬಲವಂತವಾಗಿ ತೆರವುಗೊಳಿಸಿದ ಅರಣ್ಯ ಇಲಾಖೆ

ಮೈಸೂರು : ನಾಗರಹೊಳೆ ವ್ಯಾಪ್ತಿಯ ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯಲ್ಲಿ ವಾಸ ಮಾಡುತ್ತಿದ್ದ ಜೇನುಕುರುಬ ಆದಿವಾಸಿ ಸಮುದಾಯದ ಗುಡಿಸಲುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ತೆರವುಗೊಳಿಸಿದ್ದಾರೆ.
ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಚರಣೆ ನಡೆಸಿ 6 ಗುಡಿಸಲುಗಳನ್ನು ತೆರವುಗೊಳಿಸಿದೆ.
ಈ ವೇಳೆ ಹೋರಾಟಗಾರ ಶಿವು ಮಾತನಾಡಿ, ‘ಇದು ನಮ್ಮ ಹಕ್ಕು, ನಾವು ಇಲ್ಲೇ ವಾಸ ಮಾಡುತ್ತೇವೆ. ನಮ್ಮ ಪೂರ್ವಜರು ಇಲ್ಲೇ ನೆಲೆಸಿದ್ದರು ಎಂಬುದಕ್ಕೆ ದಾಖಲೆಗಳಿವೆ. ಆದರೆ ಅರಣ್ಯ ಇಲಾಖೆಯವರು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ನಮಗೆ ಇಲ್ಲಿ ವಾಸಮಾಡಲು ಅವಕಾಶವಿದೆ’ ಎಂದು ಹೇಳಿದರು.
ಈ ಸಂಬಂಧ ಹಲವಾರು ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಆದರೆ ಅರಣ್ಯ ಇಲಾಖೆಯವರು ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದರು.
ಅರಣ್ಯ ಹಕ್ಕು ಹೋರಾಟಗಾರ ತಿಮ್ಮ, ಸುಶೀಲಮ್ಮ ಸೇರಿದಂತೆ ಆದಿವಾಸಿಗಳು ತಮ್ಮ ಹಕ್ಕಿಗಾಗಿ ಹೋರಾಟ ಮುಂದುವರಿಸಿದ್ದಾರೆ.





