ಅ.10 ರಂದು ಮಹಿಷ ಮಂಡಲೋತ್ಸವ: ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿರುವ ಮಹಿಷನಿಗೆ ಪುಷ್ಪಾರ್ಚನೆ, ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ
ಮಹಿಷ ದಸರಾ ವಿರೋಧಿಸುವವರಿಗೆ ವೇದಿಕೆಯಲ್ಲೇ ಉತ್ತರ : ಪುರುಷೋತ್ತಮ್

ಮೈಸೂರು : ಅ.10 ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಗರದಲ್ಲಿ ಮಹಿಷ ಮಂಡಲೋತ್ಸವ ಕಾರ್ಯಕ್ರಮ ಆಚರಿಸಲಾಗುವುದು ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಷ ದಸರಾ ಆಚರಣಾ ಸಮಿತಿಯಿಂದ ಅ.10 ರಂದು ಬೆಳಿಗ್ಗೆ 8.30 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿನ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುವುದು, ಬಳಿಕ 11 ಗಂಟೆಗೆ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ಮಾಡಲಾಗುವುದು, ಇದನ್ನು ವಿರೋಧಿಸುವವರಿಗೆ ವೇದಿಕೆಯಲ್ಲೇ ಉತ್ತರ ನೀಡಲಾಗುವುದು ಎಂದು ಹೇಳಿದರು.
ಚಿಂತಕ ವಿಠ್ಠಲ್ ವಗ್ಗನ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು, ಪ್ರೊ.ಕೆ.ಎಸ್.ಭಗವಾನ್, ಬಡಗಲಪುರ ನಾಗೇಂದ್ರ, ಶಿವಸುಂದರ್, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ನಂಜರಾಜ ಅರಸ್, ಅಂಶಿ ಪ್ರಸನ್ನಕುಮಾರ್ ಮೊದಲಾದವರು ವೇದಿಕೆಯಲ್ಲಿರುವರು ಎಂದರು.
ಈ ಹಿಂದೆ ಮಹಿಷ ದಸರಾಕ್ಕೆ ಅಡ್ಡಿ ಆತಂಕಗಳು ಎದುರಾದವು, ನಾವು ಅದನ್ನು ಲೆಕ್ಕಿಸದೇ ಆಚರಿಸಿದೆವು. ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲೇ ಅವಕಾಶವಿದೆ. ಕಾನೂನು ಚೌಕಟ್ಟಿನಲ್ಲಿ ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ವಿರೋಧಿಸುವವರಿಗೆ ಪೊಲೀಸರು ಕಾನೂನು ಚಾಟಿ ಬೀಸದಿರುವುದು ವಿಷಾದದ ಸಂಗತಿಯಾಗಿದೆ. ಇದು ರಾಜ್ಯ ಮಟ್ಟದ ಕಾರ್ಯಕ್ರಮ ಎಂದು ಮಾಹಿತಿ ನೀಡಿದರು.
ಚಾಮುಂಡಿ ಬೆಟ್ಟದ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಯಾರ ಅನುಮತಿಯೂ ಬೇಕಿಲ್ಲ, ಮೂಲ ನಿವಾಸಿಗಳ ಆಚರಣೆಗೆ ಅಡ್ಡಿಪಡಿಸಿದರೆ ಸಹಿಸುವುದಿಲ್ಲ, ಯಾರ ಭಾವನೆಗೂ ಧಕ್ಕೆಯಾಗದ ರೀತಿ ಕಾರ್ಯಕ್ರಮ ನಡೆಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಮಹಿಷನ ಕುರಿತು ಚಿಂತಕ ವಿಠಲ್ ವಗ್ಗನ್ ಅವರು ಬರೆದಿರುವ ಪುಸ್ತಕ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲೇಖಕ ಸಿದ್ದಸ್ವಾಮಿ, ಸೋಮಯ್ಯ ಮಲೆಯೂರು, ವಿಷಕಂಠು, ಪುಟ್ಟರಾಜು, ಅಶೋಕಪುರಂ ಮಹೇಶ್, ಮಂಜು, ಶಿವಣ್ಣ, ರವಿ ಇದ್ದರು.
ಮಹಿಷ ಚಾರಿತ್ರಿಕ ವ್ಯಕ್ತಿ : ಲೇಖಕ ಸಿದ್ಧಸ್ವಾಮಿ
ಮಹಿಷ ಚಾರಿತ್ರಿಕ ವ್ಯಕ್ತಿ, ಮಹಿಷನಿಂದಲೇ ಮೈಸೂರು ಎಂದು ನಾಮಕರಣ ಆಗಿರುವುದು. ಹಾಗಾಗಿಯೇ ಮಹಿಷ ಮಂಡಲೋತ್ಸವ ಆಚರಿಸುತ್ತಿದ್ದೇವೆ ಎಂದು ಲೇಖಕ ಸಿದ್ಧಸ್ವಾಮಿ ತಿಳಿಸಿದರು.






