Mysuru | ಕಾವೇರಿ ನದಿಯಲ್ಲಿ ಈಜಲು ಹೋದ 6 ಮಂದಿ ನೀರಿನಲ್ಲಿ ಮುಳುಗಿ ಮೃತ್ಯು

ಮೈಸೂರು: ಕಾವೇರಿ ನದಿಗೆ ಈಜಲು ಹೋಗಿದ್ದ 6 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಅರ್ಕೇಶ್ವರ ದೇಗುಲದ ಬಳಿ ನಡೆದಿದೆ.
ಮೃತಪಟ್ಟವರನ್ನು ಯಾಸಿನ್ (23), ಫಾತಿಮ್ (30), ಹುಮಾಯೂನ್ (7), ನೇಹಾನ್(19), ಅಲೀಂ(13) ಎಂದು ತಿಳಿದು ಬಂದಿದ್ದು ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.
ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ರವಿವಾರ ಉರೂಸ್ ಹಿನ್ನೆಲೆ ದರ್ಗಾಕ್ಕೆ ಬೆಂಗಳೂರು ಮತ್ತು ಊಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಂಟು ಜನರ ತಂಡವೊಂದು ಅರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ನದಿಯಲ್ಲಿ ಮುಳುಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಉಳಿದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಕಾವೇರಿ ನದಿಯಲ್ಲಿ ಮುಳುಗಿ ಆರು ಮಂದಿ ಮೃತಪಟ್ಟ ಘಟನೆಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ನೊಂದಿರುವ ಜೀವಗಳಿಗೆ ಆರ್ಥಿಕ ಸವಾಲುಗಳು ಮತ್ತಷ್ಟು ಬಾಧಿಸದಿರಲಿ ಎಂಬ ಮಾನವೀಯ ಕಾಳಜಿಯೊಂದಿಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ದುರ್ಘಟನೆಯಲ್ಲಿ ರಕ್ಷಿಸಲ್ಪಟ್ಟು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಿ ತಮ್ಮವರನ್ನು ಕೂಡಿಕೊಳ್ಳಲಿ ಎಂದು ಹಾರೈಸುತ್ತೇನೆ." ಎಂದು ಹೇಳಿದ್ದಾರೆ.






