ಅಂಬೇಡ್ಕರ್ ಯಾವುದೋ ಒಂದು ವರ್ಗಕ್ಕೋ, ಜಾತಿಗೋ ಸೀಮಿತರಲ್ಲ, ಅವರು ದೇಶದ ನಾಯಕ : ನಟ ಪ್ರಕಾಶ್ ರಾಜ್

ಮೈಸೂರು : ಅಂಬೇಡ್ಕರ್ ಎಂದರೆ ನಿರಂತರ ಪ್ರತಿರೋಧ. ಅಂಬೇಡ್ಕರ್ ಅವರಿಂದ ನಾವು ಕಲಿಯಬೇಕಾದ್ದು ಪ್ರತಿರೋಧದ ಗುಣ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಸಂಶೋಧನಾ ವಿದ್ಯಾರ್ಥಿ ವೇದಿಕೆ ಸಹಯೋಗದಲ್ಲಿ ಬಿಎಂಶ್ರೀ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಬಹಳ ಜನರು ಅಂಬೇಡ್ಕರ್ ದಲಿತರು, ದಮನಿತರು, ಅಸ್ಪೃಶ್ಯರ ನಾಯಕ ಎಂದು ಬಿಂಬಿಸಿದ್ದಾರೆ. ಆದರೆ ಅಂಬೇಡ್ಕರ್ ಯಾವುದೋ ಒಂದು ವರ್ಗಕ್ಕೋ, ಜಾತಿಗೋ ಸೀಮಿತರಲ್ಲ. ಅವರು ದೇಶದ ನಾಯಕ. ಅವರ ಆಲೋಚನೆಗಳನ್ನು ದೇಶಾದ್ಯಂತ ಬಿತ್ತರಿಸಬೇಕಿದೆ ಎಂದರು.
ದೇಶ ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೂ ನಮ್ಮ ಆಶಾಕಿರಣ ಸಂವಿಧಾನ ಮಾತ್ರ. ಸಂವಿಧಾನವನ್ನು ಉಳಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಅವರು ಹೇಳಿದರು.
ಪ್ರಾಧ್ಯಾಪಕ ಪ್ರೊ.ಎ.ನಾರಾಯಣ ಪ್ರಜಾಪ್ರಭುತ್ವದ ಸದೃಢತೆಯಲ್ಲಿ ಯುವ ಸಮುದಾಯದ ಪಾತ್ರ ವಿಷಯದ ಕುರಿತು, ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಅವರು ಪ್ರಜಾಪ್ರಭುತ್ವ ಸದೃಢತೆಯಲ್ಲಿ ಮಹಿಳಾ ಸಮುದಾಯದ ಜವಾಬ್ದಾರಿ ಕುರಿತು ವಿಷಯ ಮಂಡಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಎನ್.ಕೆ.ಲೋಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರಾಧ್ಯಾಪಕಿ ಪ್ರೊ.ಎಸ್.ಡಿ.ಶಶಿಕಲಾ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಪ್ರತಿಮೆಯಿಂದ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ದೇವನೂರ ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ ರಂಗರೂಪ ಪ್ರದರ್ಶನಗೊಂಡಿತು. ಅಂಬೇಡ್ಕರ್ ಅವರ ಛಾಯಾಚಿತ್ರಗಳ ಪ್ರದರ್ಶನ, ಸಂವಿಧಾನ ಪ್ರಸ್ತಾವ, ಬುದ್ಧರ ಪ್ರತಿಮೆ ಹಬ್ಬದ ಸಂಭ್ರಮ ಕಂಡು ಬಂದಿತು.







