ಕೆಥೆಡ್ರಲ್ ಸೊಸೈಟಿಗೆ ಅಕ್ರಮ ಸೈಟ್ ಹಂಚಿಕೆ ಆರೋಪ
ಮುಡಾ ಮಾಜಿ ಆಯುಕ್ತ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರಕಾರ ಸೂಚನೆ

ಮೈಸೂರು : ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿರುವ ಮುಡಾ ಹಗರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ಲೋಕಾಯುಕ್ತ ವರದಿ ಸಲ್ಲಿಸಲು ಸಿದ್ಧವಾಗಿದೆ. ಈ ಮಧ್ಯೆಯೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮವಾಗಿ ಸೈಟ್ ಹಂಚಿಕೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಡಾದ ಮಾಜಿ ಆಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಸೂಚನೆ ನೀಡಿದೆ.
ಮುಡಾದಿಂದ ಕ್ಯಾಥೆಡ್ರಲ್ ಸೊಸೈಟಿಗೆ 75,225 ಚದರ ಅಡಿ ಜಾಗವನ್ನು ಅಕ್ರಮವಾಗಿ ನೀಡಿ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಅಕ್ರಮವೆಸಗಿರುವ ಆರೋಪದ ಮೇಲೆ ಹಿಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಕೀಲ ವಿ.ರವಿಕುಮಾರ್, ಸ್ನೇಹಮಯಿ ಕೃಷ್ಣ, ನಿವೃತ್ತ ಶಿಕ್ಷಕ ಶಾಂತಪ್ಪದೂರು ಸಲ್ಲಿಕೆ ಮಾಡಿದ್ದರು. ಈ ಸಂಬಂಧ ಮುಡಾ ಮಾಜಿ ಆಯುಕ್ತ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರಕಾರ ಸೂಚನೆ ನೀಡಿದೆ.
ಈ ಕುರಿತು ಜನವರಿ 10ರಂದೇ ಮುಡಾ ಆಯುಕ್ತ ರಘುನಂದನ್ ಅವರಿಗೆ ಪತ್ರ ಬರೆದಿರುವ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕೆ.ಲತಾ ಅವರು, ಮುಡಾದಿಂದ ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮ ಸೈಟುಗಳ ಹಂಚಿಕೆ ಸಂಬಂಧ ಮುಡಾದ ಮಾಜಿ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ 3 ದಿನದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸುವಂತೆ ಸೂಚಿಸಿದ್ದಾರೆ.







