ಧರ್ಮಸ್ಥಳ ಪ್ರಕರಣ | ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷಿಸುವ ಕೆಲಸವನ್ನು ಸರಕಾರ ಮಾಡಲಿದೆ : ಎ.ಎಸ್.ಪೊನ್ನಣ್ಣ

ಎ.ಎಸ್.ಪೊನ್ನಣ್ಣ
ಮೈಸೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪಿತಸ್ಥರಿದ್ದರೂ ಗುರುತಿಸಿ ಶಿಕ್ಷಿಸುವ ಕೆಲಸವನ್ನು ಸರಕಾರ ಮಾಡಲಿದೆ. ರಾಜಕೀಯಕ್ಕಾಗಿ ಕೆಲವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೂರುದಾರನ ಹೇಳಿಕೆಯಂತೆ ಪಾರದರ್ಶಕ ತನಿಖೆಯಾಗಬೇಕು ಎಂದು ನಾವು ಹೇಳಿದ್ದೇವೆ. ಯಾರೇ ತಪ್ಪಿತಸ್ಥರಿದ್ದರೂ ಗುರುತಿಸಿ ಶಿಕ್ಷೆ ನೀಡುತ್ತೇವೆ. ಧರ್ಮಸ್ಥಳದ ಪಾವಿತ್ರ್ಯತೆ ಕಾಪಾಡಿ ತನಿಖೆ ಆಗಬೇಕು ಎಂದು ಸರಕಾರ ಹೇಳಿದೆ ಎಂದರು.
ವೀರೇಂದ್ರ ಹೆಗ್ಗಡೆ ಅವರೇ ಎಸ್.ಐ.ಟಿ ತನಿಖೆ ಸ್ವಾಗತ ಮಾಡಿದ್ದಾರೆ. ಆದರೆ ತನಿಖೆಯೇ ಆಗಬಾರದು ಎನ್ನಲು ಸಾಧ್ಯವೇ? ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೆಲವರು ದೂರು ಕೊಟ್ಟಿದ್ದಾರೆ. ಸುಳ್ಳು ದೂರು ಕೊಟ್ಟು ಇಂತಹ ವಾತಾವರಣ ಸೃಷ್ಟಿ ಮಾಡಿದ್ದರೆ ಅಪರಾಧ. ಅದಕ್ಕಾಗಿ ದೂರುದಾರನನ್ನು ಬಂಧಿಸಲಾಗಿದೆ. ಬಿಜೆಪಿ ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದು ಷಡ್ಯಂತ್ರ ಆಗಿದ್ದರೆ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಏನು ಎಲ್ಲವೂ ಕೂಡ ಹೊರಬರುತ್ತದೆ. ಎಲ್ಲರ ಮೇಲೂ ಕಾನೂನು ಕ್ರಮ ಆಗುತ್ತದೆ ಎಂದು ಹೇಳಿದರು.







