ಮೈಸೂರಿನಲ್ಲಿ ಕಂಬಳ ಆಯೋಜನೆಗೆ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಅಶೋಕ್ ಕುಮಾರ್ ರೈ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಈ ಬಾರಿ ಮೈಸೂರಿನಲ್ಲಿ ಮೊಟ್ಟ ಮೊದಲ ಕಂಬಳ ಉತ್ಸವವನ್ನು ಆಯೋಜನೆ ಮಾಡಲಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶುಕ್ರವಾರ ಮೈಸೂರಿಗೆ ಆಗಮಿಸಿ ಕಂಬಳ ನಡೆಸಲು ಸ್ಥಳ ಪರಿಶೀಲನೆ ನಡೆಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಬಾರಿ ಮೈಸೂರಿನ ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ಮಾಡುವ ಉದ್ದೇಶದಿಂದ ಸೂಕ್ತ ಜಾಗ ಎಲ್ಲಿದೆ ನೋಡಿ ಸ್ಥಳ ನಿಗದಿ ಮಾಡುವಂತೆ ನನಗೆ ಸೂಚಿಸಿದ್ದಾರೆ. ಹಾಗಾಗಿ ನಾನು ಮೈಸೂರಿಗೆ ಬಂದಿದ್ದೇನೆ ಎಂದು ತಿಳಿಸಿದರು.
ಮೈಸೂರಿನಲ್ಲಿ ವಿಜಯನಗರ 1ನೇ ಹಂತ ಮತ್ತು ಸಾತಗಳ್ಳಿ ರಿಂಗ್ ರಸ್ತೆ ಬಳಿ ಎರಡು ಜಾಗವನ್ನು ಗುರುತಿಸಲಾಗಿದೆ. ಎರಡು ಜಾಗಗಳಲ್ಲಿ ಯಾವುದು ಸೂಕ್ತ ಎಂದು ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಯಾವ ಜಾಗದಲ್ಲಿ ನಡೆಯಬೇಕು ಎಂದು ಮುಖ್ಯಮಂತ್ರಿಗಳು ಅಂತಿಮಗೊಳಿಸುತ್ತಾರೆ ಎಂದು ಹೇಳಿದರು.
ಕಂಬಳ ನಡೆಸಲು ಕನಿಷ್ಠ 20 ಎಕರೆಯಷ್ಟು ಸ್ಥಳಾವಕಾಶದ ಅವಶ್ಯಕತೆ ಇದ್ದು, ಪೊಲೀಸರು ಸಾತಗಳ್ಳಿ ಬಳಿಯ ಸ್ಥಳ ಸೂಕ್ತ ಎಂದು ಹೇಳುತ್ತಾರೆ. ಯಾಕೆಂದರೆ, ಲಕ್ಷಾಂತರ ಜನ ಸೇರುವುದರಿಂದ ಸೂಕ್ತ ಪಾರ್ಕಿಂಗ್ ಮತ್ತು ಕಂಬಳಕ್ಕೆ ನೀರು ಎಲ್ಲವನ್ನೂ ಒದಗಿಸಲು ವಿಶಾಲವಾದ ಜಾಗ ಬೇಕಿದೆ. ಯುವ ದಸರ ಮಹೋತ್ಸವವೂ ರಿಂಗ್ ರಸ್ತೆಯಲ್ಲೇ ನಡೆಯುವುದರಿಂದ ಕಂಬಳವನ್ನೂ ರಿಂಗ್ ರಸ್ತೆಯಲ್ಲೇ ಮಾಡಿದರೆ ಸೂಕ್ತ ಎಂದು ಒಂದಷ್ಟು ಸಲಹೆಗಳು ಬರುತ್ತಿವೆ. ಎರಡು ಸ್ಥಳವನ್ನೂ ಪರಿಶೀಲನೆ ಮಾಡಿ ಮುಖ್ಯಮಂತ್ರಿಗಳಿಗೆ ವರದಿ ಕೊಡಲಾಗುತ್ತದೆ ಎಂದರು.
ಕಂಬಳದಲ್ಲಿ ಸುಮಾರು 150 ರಿಂದ 200 ಕೋಣಗಳು ಭಾಗಿಯಾಗಲಿದ್ದು, ಅಕ್ಟೋಬರ್ 18 ಮತ್ತು19 ರಂದು ಎರಡು ದಿನಗಳ ಕಾಲ ಹಗಲು ರಾತ್ರಿ ಕಂಬಳ ಕೋಣಗಳ ಸ್ಪರ್ಧೆ ಇರುತ್ತದೆ. ಸರಿಸುಮಾರು ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕೋಣಗಳು ಒಂದು ದಿನ ಮುಂಚಿತವಾಗಿ ಮೈಸೂರಿಗೆ ಆಗಮಿಸಲಿದ್ದು ಬರುವ ಮಾರ್ಗ ಮಧ್ಯೆ ಮಡಿಕೇರಿಯಲ್ಲಿ ಸ್ವಲ್ಪ ಹೊತ್ತು ಕೋಣಗಳಿಗೆ ವಿರಮಿಸಲು ಅವಕಾಶ ಪಡೆದು ನಂತರ ಮೈಸೂರಿಗೆ ಆಗಮಿಸಲಿವೆ. ಕಂಬಳ ನಡೆಯುವ ಸ್ಥಳದಲ್ಲಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಶೈಲಿಯ ಹಾಗೂ ಸ್ಥಳೀಯ ಶೈಲಿಯ ಆಹಾರ ಮೇಳವನ್ನೂ ಆಯೋಜನೆ ಮಾಡಲಾಗುತ್ತದೆ. ಕಂಬಳ ವೀಕ್ಷಣೆಗೆ ಸುಮಾರು 8 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಪಕ್ಕದಲ್ಲಿ ಸಾಮಾನ್ಯ ಗ್ಯಾಲರಿಗಳನ್ನು ನಿರ್ಮಿಸಲಾಗುತ್ತದೆ. ಶಿಷ್ಟಾಚಾರದ ಪ್ರಕಾರ ಗಣ್ಯರಿಗೆ ವಿಐಪಿ ಪಾಸ್ ವ್ಯವಸ್ಥೆ ಇರುತ್ತದೆ. ಇನ್ನು ಉಳಿದಂತೆ ಎಲ್ಲಾ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ ಎಂದು ತಿಳಿಸಿದರು.
ನಗರದ ಸಾತಗಳ್ಳಿ ರಿಂಗ್ ರಸ್ತೆಯ ವಿಟಿಯು ಕಾಲೇಜಿನ ಬಳಿಯ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 23 ಎಕರೆ ವಿಶಾಲ ಜಾಗವನ್ನು ಕಂಬಳಕ್ಕೆ ಸೂಕ್ತ ಎಂದು ಪರಿಗಣಿಸಲಾಗಿದೆ. ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇನೆ
-ಅಶೋಕ್ ಕುಮಾರ್ ರೈ, ಶಾಸಕ






