ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲು

ಪ್ರತಾಪ್ ಸಿಂಹ
ಮೈಸೂರು, ಸೆ.23: ದಲಿತ ಸಮುದಾಯ ಮತ್ತು ದಲಿತರ ಸಾಂಸ್ಕೃತಿಕ ಅಸ್ಮಿತೆ ನೀಲಿ ಶಾಲನ್ನು ಅವಮಾನಿಸಲಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡ ಕಲಾ ಸಂಘದ ಅಧ್ಯಕ್ಷ ಮಧು ಕೆ.ಟಿ. ಅವರು ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಸಿಂಹ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ದಲಿತರನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ಸೆ.18 ರಂದು ಟಿ. ನರಸೀಪುರ ಪೊಲೀಸ್ ಠಾಣೆಯ ಮುಂಭಾಗದ ಸಾರ್ವಜನಿಕರು ಮುಕ್ತವಾಗಿ ಸಂಚರಿಸುವ ರಸ್ತೆಯಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯ ಸಂದರ್ಭ ಪ್ರತಾಪ್ ಸಿಂಹ ನೂರಾರು ಜನರ ಸಮ್ಮುಖದಲ್ಲಿ ಮತ್ತು ಮಾಧ್ಯಮಗಳ ಕ್ಯಾಮೆರಾ ಹಾಗೂ ಮೈಕ್ ಗಳ ಮುಂದೆ ನಿಂತು ದಲಿತ ಸಮುದಾಯವನ್ನು ಸಾರ್ವಜನಿಕವಾಗಿ ಹೀಯಾಳಿಸುವ ಮತ್ತು ಕೀಳಾಗಿ ಚಿತ್ರಿಸುವ ದುರುದ್ದೇಶದಿಂದಲೇ ಅತ್ಯಂತ ಅವಹೇಳನಕಾರಿ ಮತ್ತು ನಿಂದನಾತ್ಮಕ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ದಲಿತ ಸಮುದಾಯದ ಕಾರ್ಯಕರ್ತರನ್ನು ನೇರವಾಗಿ ಗುರಿಯಾಗಿಸಿ, "ನೀವು ಕೇವಲ ನೀಲಿ ಶಾಲು ಹೊದ್ದು ನಾವು ಏನೇ ಮಾಡಿದರು ಅಡ್ಡ ಬಂದು ನಿಲ್ಲುತ್ತೀರಿ, ನಿಮಗೆ ಅಂಬೇಡ್ಕರ್ ಅವರ ಬಗ್ಗೆ ಏನೂ ಗೊತ್ತಿಲ್ಲ, ಮೊದಲು ಅಂಬೇಡ್ಕರ್ ಓದಿ" ಎಂದು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಈ ಮೂಲಕ ಇಡೀ ದಲಿತ ಸಮುದಾಯದ ಸಾಂಸ್ಕೃತಿಕ ಅಸ್ಮಿತೆಯಾದ ನೀಲಿ ಶಾಲಿನ ಗೌರವವನ್ನು ಹಾಗೂ ಸಂವಿಧಾನ ಶಿಲ್ಪಿ ಗೌರವಾನ್ವಿತ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಸಾರ್ವಜನಿಕವಾಗಿ ಹೀಯಾಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿತರು ಕೇವಲ ಒಂದು ರಾಜಕೀಯ ಪಕ್ಷದ ವಿರುದ್ಧ ಮಾತನಾಡುತ್ತಿಲ್ಲ. ಬದಲಿಗೆ ಶೋಷಿತರ ಹಕ್ಕುಗಳಿಗಾಗಿ ಹೋರಾಡುವ ದಲಿತ ಸಂಘಟನೆಯ ಪದಾಧಿಕಾರಿಗಳನ್ನು 'ಹಣದ ಆಸೆಗಾಗಿ ಅಥವಾ ವೈಯಕ್ತಿಕ ಲಾಭಕ್ಕಾಗಿ ಹೋರಾಟ ಮಾಡುವವರು' ಎಂದು ಸಾರಾಸಗಟಾಗಿ ಸುಳ್ಳು ಆರೋಪ ಮಾಡಿದ್ದಾರೆ. ಇದು ನಮ್ಮ ಸಂಘಟನೆಯ ನೈತಿಕತೆಯನ್ನು ಸಾರ್ವಜನಿಕವಾಗಿ ಹತ್ಯೆ ಮಾಡುವ ಉದ್ದೇಶಪೂರ್ವಕ ಜಾತಿ ನಿಂದನೆಯಾಗಿದೆ. ಅವರು ಒಬ್ಬ ಪೊಲೀಸ್ ಅಧಿಕಾರಿಯ ಜಾತಿಯನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿ, "ನಿಮ್ಮ ಜಾತಿಯ ಅಧಿಕಾರಿ ಎಂಬ ಒಂದೇ ಕಾರಣಕ್ಕೆ ನೀವು ಅವರನ್ನು ಬೆಂಬಲಿಸುತ್ತೀರಿ ಮತ್ತು ರಕ್ಷಣೆಗೆ ನಿಲ್ಲುತ್ತೀರಿ" ಆತ ಒಬ್ಬ ಕ್ಷುಲ್ಲಕ ಕಳಪೆ ವ್ಯಕ್ತಿತ್ವದ ಇನ್ಸೆಕ್ಟರ್ ಎಂದು ಹೇಳುವ ಮೂಲಕ ಪೊಲೀಸ್ ಅಧಿಕಾರಿಯರವರ ಜಾತಿಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿ ಪರಿಶಿಷ್ಟ ಜಾತಿಗೆ ಸೇರಿದ ಧನಂಜಯರನ್ನು ಜಾತಿ ಹೆಸರಿನಲ್ಲಿ ನಿಂದನೆ ಮಾಡಿ ಬೆದರಿಕೆ ತುಚ್ಚವಾಗಿ ಮಾತನಾಡಿದ್ದಾರೆ. ಆ ಮೂಲಕ ಸಾರ್ವಜನಿಕವಾಗಿ ಅಪಮಾನಗೊಳಿಸಿ ಸಾರ್ವಜನಿಕವಾಗಿ ಜಾತಿ ವ್ಯವಸ್ಥೆಯನ್ನು ಕೆರಳಿಸುವ ಮತ್ತು ಸಮಾಜದಲ್ಲಿ ವಿವಿಧ ಜಾತಿಗಳ ನಡುವೆ ತಾರತಮ್ಯ, ದ್ವೇಷ ಹಾಗೂ ನಾಗರಿಕ ಸಂಘರ್ಷದ ವಾತಾವರಣವನ್ನು ಸೃಷ್ಟಿಸುವ ತೀವ್ರ ಪ್ರಯತ್ನವನ್ನು ಮಾಡಿದ್ದಾರೆ ಎಂದು ದೂರಲಾಗಿದೆ.
ಈ ಇಡೀ ಕೃತ್ಯವು ಆಕಸ್ಮಿಕವಾಗಿ ನಡೆದದ್ದಲ್ಲ. ಮುಖ್ಯ ಆರೋಪಿತರು ಹಾಗೂ ಈ ಶೋಭಾ ಯಾತ್ರೆಯ ಮುಖ್ಯ ಆಯೋಜಕರು (ಸಹ ಆರೋಪಿಗಳು) ಒಟ್ಟಾಗಿ ಸೇರಿ, ಪಟ್ಟಣದ ಸಾಮಾಜಿಕ ಶಾಂತಿ ಮತ್ತು ಸೌಹಾರ್ದ ಕೆಡಿಸುವ ಮತ್ತು ದಲಿತ ಸಮುದಾಯವನ್ನು ಸಾರ್ವಜನಿಕವಾಗಿ ಅಪಮಾನಿಸುವ ಉದ್ದೇಶದಿಂದಲೇ ಮೊದಲೇ ಯೋಜಿತ ಸಂಚು ರೂಪಿಸಿ ಈ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಪ್ರಚೋದನಾತ್ಮಕ ಹೇಳಿಕೆ ನೀಡಲು ಮುಕ್ತವಾಗಿ ಅವಕಾಶ ಮಾಡಿಕೊಟ್ಟು, ಅದಕ್ಕೆ ಕುಮ್ಮಕ್ಕು ನೀಡಿ ಸಹಕರಿಸಿರುವ ಆಯೋಜಕರು ಸಹ ಈ ಅಪರಾಧದಲ್ಲಿ ಸಮಾನ ಭಾಗಿಗಳು ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.






