ಜಗತ್ತಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಕನ್ನಡಕ್ಕೆ ಬರಲೆಂದು ಪ್ರಾರ್ಥಿಸಿ : ಬಾನು ಮುಷ್ತಾಕ್

ಮೈಸೂರು : ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಕನ್ನಡಕ್ಕೆ ಬರಲೆಂದು ಪ್ರಾರ್ಥಿಸುವಂತೆ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಪ್ರವೇಶಿಸಿರುವ ಕತೆಗಾರ್ತಿ ಬಾನು ಮುಷ್ತಾಕ್ ಹೇಳಿದ್ದಾರೆ.
ಅಭಿರುಚಿ ಪ್ರಕಾಶನ ಮತ್ತು ಮೈಸೂರು ಬುಕ್ ಕ್ಲಬ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಹಿತಿ ಬಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕಥೆಗಳು ಪರಿಷ್ಕೃತ ಕೃತಿ ಲೋಕಾರ್ಪಣೆ ಹಾಗೂ 2025ರ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಪ್ರಯುಕ್ತ ಸಂವಾದದಲ್ಲಿ ಮಾತನಾಡಿದರು.
ಈ ವರ್ಷದ ಬೂಕರ್‌ಗೆ 159 ಪ್ರಕಟನೆೆಗಳನ್ನು ಆಯ್ಕೆಗೊಂಡಿದ್ದವು. ಅದರಲ್ಲಿ ದೀಪಾ ಬಸ್ತಿ ಅನುವಾದಿಸಿರುವ ನನ್ನ 12 ಕತೆಗಳ ಕೃತಿಯೂ ಇದೆ. 6 ತೀರ್ಪುಗಾರರು 6 ತಿಂಗಳು ಅಧ್ಯಯನ ಮಾಡಿ ಅಂತಿಮ ಸುತ್ತಿಗೆ ನನ್ನ ಕೃತಿಯನ್ನು ಆಯ್ಕೆ ಮಾಡಿದ್ದಾರೆ. ಮೇ 20ರಂದು ಲಂಡನ್‌ನಲ್ಲಿ ಬೂಕರ್ ಪ್ರಶಸ್ತಿ ಘೋಷಣೆಯಾಗಲಿದೆ. ಇದಕ್ಕೆ ಕನ್ನಡಿಗರು ಮತ್ತು ಭಾರತದ ಜನತೆ ಪ್ರಾರ್ಥಿಸಬೇಕೆಂದು ಕೋರಿದರು.
ಅನುವಾದ ಮಾಡುವಿರಾ?: 2022ರಲ್ಲಿ ಹಿಜಾಬ್ ಕುರಿತು ಮುಲಾಜಿಲ್ಲದೆ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೆ. ಸಂದರ್ಶನ ಮಾಡಲು ಬಂದ ಬಸವ ಬಿರಾದರ್ ಎಂಬ ಪತ್ರಕರ್ತರನ್ನು ನನ್ನ ಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸುವಂತೆ ಕೇಳಿಕೊಂಡೆ. ಅವರು ದೀಪಾ ಬಸ್ತಿ ಹೆಸರು ಸೂಚಿಸಿದರು. ಅವರಿಗೆ ನನ್ನ ಕತೆಗಳನ್ನು ಅನುವಾದಿಸುವಿರಾ ಎಂದು ಕೇಳಿದೆ? ಬಳಿಕ ಬೇರೊಂದು ಲೋಕವೇ ತೆರೆದುಕೊಂಡಿತು ಎಂದರು.
ನನ್ನ ಕತೆಯನ್ನು ಗಿರೀಶ್ ಕಾಸರವಳ್ಳಿ ಅವರು 2004ರಲ್ಲಿ ಸಿನೆಮಾ ಮಾಡುವಾಗಲೂ ಸಂಭ್ರಮ ಇತ್ತು. ನಿಮ್ಮ ಕತೆಯನ್ನು ಸಿನೆಮಾ ಮಾಡುತ್ತೇನೆಂದು ಗಿರೀಶ್ ಕಾಸರವಳ್ಳಿ ಅವರು ಹೇಳುವ ಮಾತುಗಳನ್ನು ರಿಹರ್ಸಲ್ ಮಾಡಿಕೊಳ್ಳುತ್ತಿದೆ. 2005ರಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿತು ಎಂದು ಸ್ಮರಿಸಿದರು.
ಪ್ರಕಾಶಕ ಅಭಿರುಚಿ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಬಾನು ಮುಷ್ತಾಕ್ ಅವರ ಕೃತಿ ಆಯ್ಕೆಗೊಂಡಿರುವುದು ಕನ್ನಡದ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದೆ ಎಂದು ನುಡಿದರು.
ಲೇಖಕಿ ಪ್ರೀತಿ ನಾಗರಾಜ್ ಸಂವಾದ ನಿರ್ವಹಿಸಿದರು. ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ, ಹಿರಿಯ ಲೇಖಕಿ ಪದ್ಮ ಶ್ರೀರಾಮ, ಶುಭ ಸಂಜಯ್ ಅರಸ್ ಇದ್ದರು.
ನೊಬೆಲ್ ನಂತರ ಪ್ರಪಂಚದ ಎರಡನೇ ಅತಿ ದೊಡ್ಡ ಪ್ರಶಸ್ತಿ ಬೂಕರ್. ನೊಬೆಲ್ ಜೀವಮಾನ ಸಾಧನೆಗೆ ಕೊಡಲಾಗುತ್ತದೆ. ಬೂಕರ್ ಸಾಹಿತ್ಯ ಕೃತಿಗೆ ನೀಡಲಾಗುತ್ತಿದೆ. ಮ್ಯಾನ್ ಬೂಕರ್, ಇಂಟರ್‌ನ್ಯಾಷನಲ್ ಬೂಕರ್ 2 ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಇಂಟರ್‌ನ್ಯಾಷನಲ್ ಬೂಕರ್‌ಗೆ ಜಗತ್ತಿನ ಯಾವುದೇ ಭಾಗದಲ್ಲಿ ಯಾವುದೇ ಭಾಷೆಯಲ್ಲಿ ಬರೆದು ಇಂಗ್ಲಿಷ್‌ಗೆ ಅನುವಾದಗೊಂಡ ಕೃತಿಯನ್ನು ಸಲ್ಲಿಸಬಹುದಾಗಿದೆ.
-ಬಾನು ಮುಷ್ತಾಕ್, ಕತೆಗಾರ್ತಿ







