ಪ್ರಧಾನಿ ನರೇಂದ್ರ ಮೋದಿ ಮುಂದೊಂದು ದಿನ ನನ್ನನ್ನು ಅಭಿನಂದಿಸುತ್ತಾರೆ ಎಂಬ ನಂಬಿಕೆ ಇದೆ : ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್

ಮೈಸೂರು : ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದೊಂದು ದಿನ ನನ್ನನ್ನು ಅಭಿನಂದಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನನ್ನ ಸಾಹಿತ್ಯದ ಮೂಲಕ ಭರವಸೆಯುಳ್ಳ ಪಾತ್ರಗಳನ್ನೆ ನಿರ್ಮಾಣ ಮಾಡಿದ್ದೇನೆ. ಯಾರೂ ನಿರಾಶೆಗೆ ಹೋಗಲ್ಲ. ಆಶಾವಾದದ ಪಾತ್ರಗಳನ್ನೇ ಸೃಷ್ಟಿ ಮಾಡಿದ್ದೇನೆ. ಅಂತಹದೇ ಆತ್ಮವಿಶ್ವಾಸದ ಭರವಸೆಯನ್ನು ನಾನು ಹೊಂದಿದ್ದೇನೆ. ಪ್ರಧಾನಿ ಸೇರಿದಂತೆ ಯಾರೂ ನನಗೆ ಅಭಿನಂದನೆ ಸಲ್ಲಿಸಿಲ್ಲ, ಅವರೆಲ್ಲರೂ ಈ ಪ್ರಶಸ್ತಿಗೆ ಸಂಬಂಧಿಸಿದಂತೆ ಮುಂದೊಂದು ದಿನ ಅಭಿನಂದಿಸುತ್ತಾರೆ ಎಂದು ಹೇಳಿದರು.
ಬೂಕರ್ ಪ್ರಶಸ್ತಿ ಬಂದ ಮೇಲೆ ದೇಶ ಸೇರಿದಂತೆ ಪ್ರಪಂಚದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಪತ್ರಿಕೆ, ಮ್ಯಾಗಝೀನ್‌ಗಳಲ್ಲಿ ಮುಖಪುಟದಲ್ಲಿ ಸುದ್ದಿ ಪ್ರಸಾರವಾಗುತ್ತಿವೆ. ಟರ್ಕಿ, ಶ್ರೀಲಂಕಾ, ವಿಯೇಟ್ನಾಂ ಸೇರಿದಂತೆ ಅನೇಕ ದೇಶದವರು ಆಹ್ವಾನಿಸುತ್ತಿದ್ದಾರೆ. ಆದರೆ ಶೇ.70ರಷ್ಟು ಆಹ್ವಾನಗಳಿಗೆ ನಾನು ಹೋಗಲು ಆಗುತ್ತಿಲ್ಲ ಎಂದು ಹೇಳಿದರು.
ಕೇರಳ ರಾಜ್ಯದಲ್ಲಂತೂ ಹಲವಾರು ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಸಾಕಷ್ಟು ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಪ್ರಶಸ್ತಿ ಬಂದ ನಂತರ ಒಂದು ದಿನವೂ ನನಗೆ ಬಿಡುವು ಸಿಗುತ್ತಿಲ್ಲ. ಇದೆಲ್ಲವೂ ಜಾಗತಿಕ ಮಟ್ಟದಲ್ಲಿ ಕನ್ನಡಕ್ಕೆ ಸಂದ ಗೌರವ ಎಂದು ಹೇಳಿದರು.
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮಳೇನಾಧ್ಯಕ್ಷ ಸ್ಥಾನಕ್ಕೆ ಆಹ್ವಾನ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಅಧ್ಯಕ್ಷರ ವೈಯಕ್ತಿಕ ತೀರ್ಮಾನ ಅಲ್ಲ. ಪ್ರಜಾಸತ್ತಾತ್ಮಕವಾಗಿ ಎಲ್ಲರ ಅಭಿಪ್ರಾಯದಂತೆ ಆಹ್ವಾನ ನೀಡಿರುವುದು. ಹಾವೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ಧಾರ್ಮಿಕ ಪೂರ್ವಾಗ್ರಹದಿಂದ ಒಂದು ಗೋಷ್ಠಿಗೂ ಮುಸ್ಲಿಮರಿಗೆ ಆಹ್ವಾನ ನೀಡದಿದ್ದ ಅಧ್ಯಕ್ಷರು, ಇಂದು ಮುಸ್ಲಿಮ್ ಮಹಿಳೆಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಪ್ರಾತಿನಿಧ್ಯ ನೀಡಿದ್ದಾರೆ ಎಂದರೆ ಅವರಲ್ಲಿ ಬದಲಾವಣೆಯಾಗಿದೆ, ಸಾಮಾಜಿಕ ಸ್ಥಿತ್ಯಂತರವಾಗಿದೆ ಎಂದು ತಿಳಿಯೋಣವೇ ಕಾದು ನೋಡೋಣ ಎಂದು ಹೇಳಿದರು.
1965ರಲ್ಲಿ ಬೂಕರ್ ಪ್ರಶಸ್ತಿ ಪ್ರಾರಂಭ ಆಯಿತು. ಅಲ್ಲಿಂದ ಇಲ್ಲಿವರೆಗೂ ಸಣ್ಣ ಕಥೆಗಳಿಗೆ ಬೂಕರ್ ಪ್ರಶಸ್ತಿ ಸಿಕ್ಕಿಲ್ಲ. ಆದರೆ ಆಯ್ಕೆ ಸಮಿತಿ ನನ್ನನ್ನು ಲಂಡನ್‌ಗೆ ಆಹ್ವಾನಿಸಿತು. ಅಲ್ಲಿಗೆ ಹೋದ ಸಂದರ್ಭದಲ್ಲಿ ಅಲ್ಲಿನ ಕೆಲವರು ನಿಮ್ಮ ಕಥೆ ಚೆನ್ನಾಗಿದೆ, ಆದರೆ ಸಣ್ಣ ಕಥೆಗಳಿಗೆ ಬೂಕರ್ ಸಿಗಲ್ಲ ಎಂದು ಹೇಳುತ್ತಿದ್ದರು. ಇದರಿಂದ ನನಗೆ ಸಿಟ್ಟು ಬಂದು ನಾಲ್ಕು ದಿನಗಳ ಹಿಂದೆಯೇ ಭಾಷಣ ತಯಾರಿ ಮಾಡಿ ಪ್ರಶಸ್ತಿ ಸ್ವೀಕರಿಸಿದ ಮೇಲೆ ನನ್ನ ಭಾವನೆಯನ್ನು ಹಂಚಿಕೊಂಡೆ ಎಂದರು.
ಬೂಕರ್ ಪ್ರಶಸ್ತಿಯನ್ನು ಒಂದು ಎನ್.ಜಿ.ಓ ನೀಡುತ್ತಿದೆ. ಪ್ರಶಸ್ತಿಗೆ ಆಯ್ಕೆ ಮಾಡಬೇಕಾದರೆ, ಆ ಸಾಹಿತ್ಯವನ್ನು ಸಾಕಷ್ಟು ಅಧ್ಯಯನ ಮಾಡಿ ಯಾವ ಮುಲಾಜಿಗೂ ಒಳಗಾಗದೆ ಮೌಲ್ಯ ಮಾಪನಮಾಡಿ ನ್ಯಾಯಯುತ ನಿರ್ಧಾರ ಮಾಡುತ್ತಾರೆ. ಹಾಗಾಗಿ ಈ ಪ್ರಶಸ್ತಿಗೆ ಹೆಚ್ಚಿನ ಮೌಲ್ಯವಿದೆ ಎಂದು ಹೇಳಿದರು.
ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ನಗರ ಉಪಾಧ್ಯಕ್ಷ ರವಿ ಪಾಂಡವಪುರ, ಗ್ರಾಮಾಂತರ ಉಪಾಧ್ಯಕ್ಷ ದಾ.ರಾ.ಮಹೇಶ್ ಉಪಸ್ಥಿತರಿದ್ದರು.
ಮಹಿಳಾ ಕಾಯ್ದೆ ಜಾರಿಗೆ ತರಬೇಕು:
ಮಹಿಳೆಯರ ಕುರಿತು ವೈಯಕ್ತಿಕ ಟೀಕೆ, ನಿಂದನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಬಲ ಮಹಿಳಾ ಕಾಯ್ದೆ ಜಾರಿಗೆ ತರಬೇಕು ಎಂದು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಸಚಿವೆ ಲಕ್ಞ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರು ಎಂದು ಹೆಬ್ಬಾಳ್ಕರ್ ಅಳುತ್ತಾ ತಮ್ಮ ನೋವನ್ನು ವ್ಯಕ್ತಪಡಿಸಿದರು.
ಇದೀಗ ಮತ್ತೊಬ್ಬ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ವಿರುದ್ಧ ವೈಯಕ್ತಿಕವಾಗಿ ನಿಂದನೆ ಮಾಡಿದ್ದಾರೆ. ಇಂತಹ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಇಂತಹದಕ್ಕೆ ಕಡಿವಾಣ ಹಾಕಲು ವಿಧಾನಸಭೆಯಲ್ಲಿ ಮಹಿಳಾ ನಿಂದನೆ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.