ಬೆಂಗಳೂರು ಕಾಲ್ತುಳಿತ ಘಟನೆ ಮುಚ್ಚಿ ಹಾಕಲು ಜಾತಿಗಣತಿ ಅಸ್ತ್ರ: ಸಂಸದ ಯದುವೀರ್ ಒಡೆಯರ್

ಮೈಸೂರು: ಬೆಂಗಳೂರು ಕಾಲ್ತುಳಿತ ಘಟನೆಯಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಹೀಗಾಗಿ ಪ್ರಕರಣವನ್ನು ಮುಚ್ಚಿ ಹಾಕಿ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಮರು ಜಾತಿಗಣತಿಗೆ ಸರ್ಕಾರ ಮುಂದಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.
ರಾಜ್ಯದಲ್ಲಿ ಮತ್ತೆ ಜಾತಿಗಣತಿ ಮರು ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಯದುವೀರ್, ಜನರನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್ ನವರು ಮುಂದಾಗಿದ್ದಾರೆ. ಕಾಲ್ತುಳಿತ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ. ಸರ್ಕಾರದವರು ಪೊಲೀಸ್ ಇಲಾಖೆಯ ಮೇಲೆ ಆರೋಪ ಮಾಡ್ತಿದ್ದಾರೆ. ಆ ಪ್ರಕರಣ ಮುಚ್ಚಿ ಹಾಕಲು ಕಾಂತರಾಜು ವರದಿ ತಂದಿದ್ದಾರೆ ಎಂದರು.
ನೂರಾರು ಕೋಟಿ ವ್ಯಯಿಸಿ ಕಾಂತರಾಜು ಆಯೋಗ ಸಿದ್ದಪಡಿಸಿದ್ದ ಜಾತಿಗಣತಿ ವರದಿಯನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ಬೆಂಗಳೂರು ಕಾಲ್ತುಳಿತ ಘಟನೆಯಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ 11 ಯುವ ಜನರು ಸಾವನ್ನಪ್ಪಿದ್ದಾರೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ, ಜನರ ದಿಕ್ಕು ತಪ್ಪಿಸಲು ಮರು ಜಾತಿಗಣತಿಗೆ ಮುಂದಾಗಿದೆ. 90 ದಿನದಲ್ಲಿ ಮರು ಜಾತಿಗಣತಿ ನಡೆಸಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರನ್ನು ಉಳಿಸಲು ಕಾಂಗ್ರೆಸ್ ಹೈಕಮಾಂಡ್ ಹಿಂದುಳಿದ ವರ್ಗಗಳ ಹಿತವನ್ನು ಬಲಿಕೊಟ್ಟಿದೆ. ಈಗಾಗಲೇ ಕೇಂದ್ರ ಸರ್ಕಾರ ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಕೂಡ ನಡೆಸುವಂತೆ ಸೂಚಿಸಿದೆ. ಹಾಗಾಗಿ ರಾಜ್ಯದಲ್ಲಿ ಮರು ಜಾತಿಗಣತಿ ನಡೆಸುವ ಅವಶ್ಯಕತೆ ಇಲ್ಲ. ರಾಜ್ಯದ ಜಾತಿಗಣತಿ ವಿಚಾರವನ್ನು ರಾಹುಲ್ ಗಾಂಧಿ, ವೇಣುಗೋಪಾಲ್ ನಿರ್ಧರಿಸಲು ಮುಂದಾಗಿದ್ದು ಸರಿಯಲ್ಲ. ಈ ಮರು ಜಾತಿಗಣತಿ ನಡೆಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







