ಪೆರಿಯಾರ್‌ರಿಂದ ಬಡವರ, ಶೋಷಿತರ ಪರ ಹೋರಾಟ : ಚೇತನ್ ಅಹಿಂಸಾ

ಮೈಸೂರು : ಪೆರಿಯಾರ್ ಶ್ರೀಮಂತರಾಗಿದ್ದರೂ ಬಡವರ ಪರ ಹೋರಾಟ ಮಾಡಿದ್ದರು. ಅಸ್ಪೃಶ್ಯರಲ್ಲದಿದ್ದರೂ ಶೋಷಿತರ ಪರ ಹೋರಾಟ ಮಾಡಿದ್ದರು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ನಗರದ ರಾಮಕೃಷ್ಣನಗರದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ರವಿವಾರ ಅಂತರ್‌ರಾಷ್ಟ್ರೀಯ ಮಾನವ ಏಳಿಗೆ ಮತ್ತು ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಪೆರಿಯಾರ್ ಮತ್ತು ಸಾಮಾಜಿಕ ಪರಿವರ್ತನಾ ಹೋರಾಟಗಳ ಕುರಿತು ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಮತ್ತು ಪೆರಿಯಾರ್ ಪರಿಣಾಮಕಾರಿ ಕನ್ನಡಿಗರು, ಪೆರಿಯಾರ್ ತಮಿಳುನಾಡಿನ ಈರೋಡ್‌ನಲ್ಲಿ ಜನಿಸಿದ್ದರೂ, ಮೂಲ ಕರ್ನಾಟಕದ ಚಿತ್ರದುರ್ಗದವರು. ಅವರ ಕುಟುಂಬ ವ್ಯಾಪಾರಕ್ಕಾಗಿ ತಮಿಳುನಾಡಿಗೆ ಹೋಗಿ ನೆಲೆಸಿತ್ತು ಎಂದು ಹೇಳಿದರು.
ಪೆರಿಯಾರ್ ಅಸಮಾನತೆ ಅನ್ಯಾಯದ ವಿರುದ್ಧ ಸಿಡಿದೆದ್ದು ಉತ್ತಮ ಸಿದ್ಧಾಂತವನ್ನು ಇಟ್ಟುಕೊಂಡಿದ್ದವರು. ಸಂವಿಧಾನದ ಮೂಲ ಆಶಯವನ್ನು ಪೆರಿಯಾರ್‌ರವರಲ್ಲಿ ಕಾಣುತ್ತೇವೆ. ಪೆರಿಯಾರ್ ಸಾಮಾಜಿಕವಾಗಿ ಹೆಚ್ಚು ಹೆಚ್ಚು ಬೆಳೆಯುತ್ತಿದ್ದಾರೆ ಎಂದು ಹೇಳಿದರು.
ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಪೂಜಿಸುತ್ತೇವೆಯೇ ಹೊರತು ಅವರ ಆದರ್ಶಗಳನ್ನು ಪಾಲಿಸುತ್ತಿಲ್ಲ. ಈ ಎಲ್ಲ ನಾಯಕರ ಅದರ್ಶವನ್ನು ಪಾಲಿಸುವ ಜೊತೆಗೆ ಪೆರಿಯಾರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಟಿಪ್ಪು ಸುಲ್ತಾನ್ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಟಿ.ಗುರುರಾಜ್, ಟಿಪ್ಪು ಈ ನಾಡು ಕಂಡ ಅಪ್ರತಿಮ ಹೋರಾಟಗಾರ. ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟಂತಹ ಇತಿಹಾಸವನ್ನು ಈ ದೇಶದ ಯಾವ ರಾಜರೂ ಮಾಡಿಲ್ಲ. ಟಿಪ್ಪು ಹತನಾದ ಮೂರು ವರ್ಷಕ್ಕೆ ಇಲ್ಲಿನ ರಾಜರುಗಳು ಬ್ರಿಟಿಷರಿಗೆ ಶರಣಾಗುತ್ತಾರೆ ಎಂದರು.
ಇದಕ್ಕೂ ಮೊದಲು ಮುಳ್ಳೂರು ಶಾಲೆಯ ವಿದ್ಯಾರ್ಥಿಗಳಿಂದ ಕನ್ನಡದ ಹುಲಿ ಟಿಪ್ಪು ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕೆ.ಫೈರೋಝ್ ಅಭಿನಯದಲ್ಲಿ ಪೆರಿಯಾರ್ ನಡೆ-ನುಡಿ ಆಧಾರಿತ ತಂದೆ ಪೆರಿಯಾರ್ ನಾಟಕ ಪ್ರದರ್ಶನ ನಡೆಯಿತು. ಬಳಿಕ ಶ್ರೀಧರ್ ಜೈನ್ ಮತ್ತು ತಂಡದಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆದರೆ, ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಸಿಬ್ಬಂದಿಯಿಂದ ಕ್ಯಾನ್ಸರ್ ಜಾಗೃತಿ ಕಿರುನಾಟಕ ನಡೆಯಿತು.
ಕಾರ್ಯಕ್ರಮದಲ್ಲಿ ಡಾ.ಅಮರ್ ಕುಮಾರ್, ಭಾರತ್ ಕ್ಯಾನ್ಸರ್ ಆಸ್ಪತ್ರೆ ಮುಖ್ಯಸ್ಥ ಡಾ.ಅಜಯ್ ಕುಮಾರ್, ಭಾಗ್ಯಲಕ್ಷ್ಮಿ, ಬಾರಕೋಲು ರಂಗಸ್ವಾಮಿ, ಸಹಾಯಕ ಪ್ರಾಧ್ಯಾಪಕಿ ಪದ್ಮಶ್ರೀ ಮತ್ತಿತರರು ಉಪಸ್ಥಿತರಿದ್ದರು.
ಮುಸ್ಲಿಮ್ ರಾಜನೆಂಬ ಕಾರಣಕ್ಕೆ ಇಂದು ಟಿಪ್ಪು ಸುಲ್ತಾನ್‌ರನ್ನು ಕೀಳು ಮಟ್ಟದಲ್ಲಿ ಚಿತ್ರಿಸಲಾಗುತ್ತಿದೆ. ನೈಜ ಇತಿಹಾಸವನ್ನು ಮುಚ್ಚಿಟ್ಟು ಸುಳ್ಳನ್ನು ಪ್ರಚಾರ ಮಾಡಲಾಗುತ್ತಿದೆ.
-ಡಾ.ಅಮರ್ ಕುಮಾರ್, ಸಾಮಾಜಿಕ ಹೋರಾಟಗಾರ.







