ಸಂಗೀತಕ್ಕೆ ಆಸಕ್ತಿ , ಶ್ರದ್ದೆ, ಏಕಾಗ್ರತೆ, ಶ್ರಮ ಅಗತ್ಯ : ಸಿಎಂ ಸಿದ್ದರಾಮಯ್ಯ

ಮೈಸೂರು : ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ʼಸಂಗೀತ ವಿದ್ವಾನ್ ಪ್ರಶಸ್ತಿʼ ಪುರಸ್ಕಾರ ಆಗಿರುವುದು ಕೇವಲ ಅವರ ಸಂಗೀತ ಸಾಧನೆಗೆ ಸಿಕ್ಕ ಗೌರವ ಅಲ್ಲ, ನಮ್ಮನ್ನು ನಾವೇ ಗೌರವಿಸಿಕೊಂಡಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ವುಗೆ ವ್ಯಕ್ತಪಡಿಸಿದರು.
ಮೈಸೂರು ಅರಮನೆ ಆವರಣದಲ್ಲಿ ಸೋಮವಾರ ಸಂಜೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ʼರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿʼ ಪ್ರದಾನ ಮಾಡಿ ಮಾತನಾಡಿದರು.
ದಸರಾ ಪ್ರಯುಕ್ತ ಪ್ರತಿ ವರ್ಷ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ಪಳಗಿದ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ನೀಡಲಾಗಿದೆ. ಅತಿ ಬಡತನದ ಕುಟುಂಬದಿಂದ ಬಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಂಗೀತ ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ ವೆಂಕಟೇಶ್ ಕುಮಾರ್ ಸಂಗೀತ ವಿದ್ವಾನ್ ಪುರಸ್ಕಾರಕ್ಕೆ ಅತೀ ಅರ್ಹರು. ಇದು ನಮಗೇ ಸಲ್ಲುವ ಗೌರವ ಎಂದರು.
ಸಂಗೀತಕ್ಕೆ ಆಸಕ್ತಿ , ಶ್ರದ್ದೆ, ಏಕಾಗ್ರತೆ, ಶ್ರಮ ಅಗತ್ಯ. ಇಷ್ಟು ಇದ್ದರೆ ಸಂಗೀತ ಸಾಧನೆ ಸಾಧ್ಯ ಎಂದರು.
ಕಲಾನಿಧಿ ವಿದ್ವಾನ್ ವಾಸುದೇವಾಚಾರ್ಯ ಅವರ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎನ್ನುವ ಶಾಸಕ ಟಿ.ಎಸ್.ಶ್ರೀವತ್ಸ ಅವರ ಬೇಡಿಕೆಯಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ಟಿ.ಎಸ್.ಶ್ರೀವತ್ಸ, ಡಿ.ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಗ್ಯಾರಂಟಿ ಅನುಷ್ಠಾನ ಯೋಜನೆ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು.







