ʼಸಿಎಂ ಬದಲಾವಣೆ ವಿಚಾರʼ ಮಾಧ್ಯಮದವರು ಮಾತನಾಡುವುದೇ ಜಾಸ್ತಿಯಾಗಿದೆ : ಸಿಎಂ ಸಿದ್ದರಾಮಯ್ಯ ಗರಂ

ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು : ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಮಾತನಾಡುವುದಕ್ಕಿಂತ ಮಾಧ್ಯಮದವರು ಮಾತನಾಡುವುದೇ ಜಾಸ್ತಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ವೇಳೆ ರಾಜ್ಯದಲ್ಲಿ ನೆಲೆಸಿರುವ ಬಿಹಾರ ಮತದಾರರು ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎಂದರೆ ಯಾರು ಮಾತನಾಡಬೇಕು? ಕಾಂಗ್ರೆಸ್ ಹೈಕಮಾಂಡ್ ಮಾತನಾಡಬೇಕಲ್ಲವೆ? ಆದರೆ ನಿಮ್ಮದೇ( ಮಾಧ್ಯಮದವರದೇ) ಜಾಸ್ತಿಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮಾತನಾಡಬೇಕು, ಬೇರೆ ಯಾರೇ ಮಾತನಾಡಿದಋೂ ಆ ಮಾತಿಗೆ ಕಿಮ್ಮತ್ತಿಲ್ಲ ಎಂದು ಹೇಳಿದರು.
ಸಂಪುಟ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ಬಿಹಾರ ಚುನಾವಣೆಯ ನಂತರ ರಾಹುಲ್ ಗಾಂಧಿ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
ಹುಲಿ ದಾಳಿ ತಡೆಗೆ ಕ್ರಮ:
ಹುಲಿ ದಾಳಿ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅರಣ್ಯ ಪ್ರದೇಶದಲ್ಲಿ ಜನರ ಓಡಾಟ ಜಾಸ್ತಿ ಆಗಿರುವುದರಿಂದ, ರೆಸಾರ್ಟ್ಗಳು ನಿರ್ಮಾಣ ಆಗಿರುವುದು. ಹೆಚ್ಚು ಸಫಾರಿ ಮಾಡುತ್ತಿರುವುದರಿಂದ ಹುಲಿಗಳು ನಾಡಿನತ್ತ ಬರುತ್ತಿವೆ. ಅರಣ್ಯದಲ್ಲಿ ನೀರು ಮತ್ತು ಮೇವು ಇಲ್ಲದಿರುವುದು ಮತ್ತು ಚಿರತೆ ಹಾವಳಿ ಹೆಚ್ಚಾಗಿರುವುದರಿಂದ ಅರಣ್ಯದಲ್ಲಿ ಇರುವ ಹುಲಿ, ಆನೆ, ಕಾಡು ಹಂದಿ, ಚಿರತೆ, ಜಿಂಕೆ ಹೊರ ಬರುತ್ತಿವೆ ಎಂದು ಹೇಳಿದರು.
ಈಗಾಗಲೇ ವನ್ಯ ಪ್ರಾಣಿ ಮಾನವ ಸಂಘರ್ಷ ತಡೆಗಟ್ಟಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ನಾನು ಒಂದು ಮೀಟಿಂಗ್ ಮಾಡುತ್ತೇನೆ ಎಂದು ಹೇಳಿದರು.
ಬಿಹಾರ ಚುನಾವಣೆಗೆ ಕರೆದರೆ ಹೋಗುತ್ತೇನೆ:
ಬಿಹಾರ ಚುನಾವಣೆಯಲ್ಲಿ ಪ್ರಚಾರ ಮಾಡುವಂತೆ ಇದೂವರೆಗೂ ನನ್ನನ್ನು ಕರೆದಿಲ್ಲ, ಕರೆದರೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಹಾರದಲ್ಲಿ ನನ್ನ ಪ್ರಕಾರ ಇಂಡಿಯಾ ಮೈತ್ರಿ ಕೂಟ ಗೆಲ್ಲಲಿದೆ. ಅಲ್ಲಿನ ಆಡಳಿತ ವೈಫಲ್ಯ, ಭ್ರಷ್ಟಾಚಾರ, ದುರಾಡಳಿತದಿಂದ ಬೇಸತ್ತಿದ್ದಾರೆ. ಅದು ಇಂಡಿಯಾ ಕೂಟಕ್ಕೆ ಅನುಕೂಲ ಆಗಲಿದೆ ಎಂದರು.
ನಿತೀಶ್ ಕುಮಾರ್ ನಮ್ಮ ಗ್ಯಾರಂಟಿ ಯೋಜನೆಯನ್ನು ಅಲ್ಲಿ ಕಾಪಿ ಮಾಡಿದ್ದಾರೆ. ಒಂದು ಬಾರಿ ಹತ್ತು ಸಾವಿರ ರೂ.ಕೊಡುವುದಾಗಿ ಹೇಳಿದ್ದಾರೆ. ನಾವು ಪ್ರತಿ ತಿಂಗಳು 1 ಕೋಟಿ 24 ಲಕ್ಷ ಮಹಿಳೆಯರಿಗೆ 2 ಸಾವಿರ ರೂ ನೀಡುತ್ತಿದ್ದೇವೆ. ಇದುವರೆಗೂ 1 ಲಕ್ಷ ಕೋಟಿ ಗಿಂತಲೂ ಹೆಚ್ಚು ಖರ್ಚು ಮಾಡಿದ್ದೇವೆ ಎಂದು ಹೇಳಿದರು.







