ಮೈಸೂರು ವಿವಿ ಬಲವರ್ಧನೆಗೆ ವಿಶೇಷ ಆದ್ಯತೆ : ಸಿಎಂ ಸಿದ್ದರಾಮಯ್ಯ

ಮೈಸೂರು : ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯದ ಬಲವರ್ಧನೆಗೆ ವಿಶೇಷ ಆದ್ಯತೆ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ಡಾ.ಕೆ.ಶಿವಕುಮಾರ್ ಅಭಿನಂದನಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟ ಸಹಯೋಗದಲ್ಲಿ ನೂತನ ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ನೌಕರರಿಗೆ ಪಿಂಚಣಿ ಕೊಡಲಾಗದ ಸ್ಥಿತಿಗೆ ತಲುಪಿದೆ. ಅದಕ್ಕೆ ಕುಲಪತಿಗಳೇ ಕಾರಣರಾಗಿದ್ದಾರೆ. ಮೈಸೂರು ವಿವಿ ಬಲಪಡಿಸಲು ಸರಕಾರ ಕ್ರಮವಹಿಸಲಿದೆ ಎಂದು ಹೇಳಿದರು.
ಮೈಸೂರು ವಿವಿ ಬಲಪಡಿಸಿ: ಪ್ರಧಾನ ಭಾಷಣ ಮಾಡಿದ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ದೇಶದ ಗೌರವಾನ್ವಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸೂರು ವಿವಿಗೆ ಬಂದಿರುವ ದುಸ್ಥಿತಿಯನ್ನು ನೆನೆದರೆ ಕಣ್ಣೀರು ಬರುತ್ತದೆ. ಮುಖ್ಯಮಂತ್ರಿಯವರು ಮೈಸೂರು ವಿವಿಯನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಪ್ರತಿಷ್ಠಿತ ವಿವಿ ಯಾಕೆ ಈ ಸ್ಥಿತಿಗೆ ತಲುಪಿದೆ? ಯಾಕೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ ?ಎಂದು ನೂತನ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಪ್ರಶ್ನೆ ಮಾಡಬೇಕು. ಬರೀ ಕಟ್ಟಡ, ಕಾಂಪೌಂಡ್ ಕಟ್ಟುವುದು ಬೇಡ. ಉಪ ಕುಲಪತಿಗಳು ಉಪ ಕಂಟ್ರಾಕ್ಟರ್ ಆಗಬಾರದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪವಹಿಸಿದ್ದರು. ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಶಾಸಕರಾದ ತನ್ವೀರ್ ಸೇಠ್, ಎ.ಆರ್.ಕೃಷ್ಣಮೂರ್ತಿ, ಕೆ. ಹರೀಶ್‌ಗೌಡ, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ನಿಗಮ ಮಂಡಳಿ ಅಧ್ಯಕ್ಷರಾದ ರಾಮಪ್ಪ, ಗಣೇಶ್, ಕೆ.ಶಿವಕುಮಾರ್ ಅಭಿನಂದನಾ ಸಮಿತಿ ಸಂಚಾಲಕ ಹರಿಹರ ಆನಂದಸ್ವಾಮಿ, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮ್ಮಣ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ಕರಾಮುವಿ ಸಿಂಡಿಕೇಟ್ ಸದಸ್ಯ ಮಹೇಶ್ ಸೋಸ್ಲೆ, ಸೋಮಯ್ಯ ಮಲೆಯೂರು ಮುಂತಾದವರಿದ್ದರು.
ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ ಸ್ವಾಗತಿಸಿದರು. ಡಾ.ನಿಂಗರಾಜ್ ತಂಡದವರು ನಾಡಗೀತೆ ಹಾಡಿದರು. ಸಭೆಯ ಆರಂಭದಲ್ಲಿ ಸಂವಿಧಾನದ ಪ್ರಾಸ್ತಾವನೆ ಓದಲಾಯಿತು.
ಬ್ಯಾಕ್ ಲಾಗ್ ಹುದ್ದೆ ತುಂಬಬೇಕು: ಡಾ.ಕೆ.ಶಿವಕುಮಾರ್ ಮನವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದಪರ ಇರುವವರು, ನಿಮ್ಮ ಅವಧಿಯಲ್ಲೇ ಬ್ಯಾಕ್ ಲಾಗ್ ಹುದ್ದೆ ತುಂಬಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕದ ಅನೇಕ ದಲಿತರಲ್ಲಿ ಲ್ಯಾಂಡ್ ರೆಕಾರ್ಡ್ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರೆಲ್ಲರಿಗೂ ಲ್ಯಾಂಡ್ ರೆಕಾರ್ಡ್ ಮಾಡಿಸಿಕೊಡಬೇಕು. ಎಲ್ಲಾ ವಿವಿ ಗಳಲ್ಲೂ ಬುದ್ಧಿಸಂ ಕೋರ್ಸ್ ಪ್ರಾರಂಭ ಮಾಡಬೇಕು ಎಂದು ಹೇಳಿದರು.
ನನ್ನ ಅಧಿಕಾರವಧಿ 6 ವರ್ಷ ಇದ್ದು, ನನ್ನ ಅವಧಿಯಲ್ಲಿ ನಾನು ಎಂದೂ ಭ್ರಷ್ಟಾಚಾರ ಮಾಡುವುದಿಲ್ಲ. ನನಗೆ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರುವುದಿಲ್ಲ. ಅಧಿಕಾರ ಪೂರ್ಣಗೊಂಡ ನಂತರ ಇದಕ್ಕಿಂತ ದೊಡ್ಡ ಸಮಾರಂಭ ಆಯೋಜನೆ ಮಾಡಿ ಇದೇ ನೈತಿಕತೆಯಿಂದ ಮಾತನಾಡುತ್ತೇನೆ ಎಂದು ಡಾ.ಕೆ. ಶಿವಕುಮಾರ್ ಹೇಳಿದರು.
ದಲಿತರು ಅಧಿಕಾರ ಕೇಳುವುದನ್ನು ತಪ್ಪಾಗಿ ಪರಿಭಾವಿಸಬಾರದು. ದಲಿತರು ಅಧಿಕಾರ ಕೇಳುವುದನ್ನು ವಿಶಾಲ ಮನಸ್ಸಿನಿಂದ ಸ್ವೀಕರಿಸಬೇಕು. ದಲಿತರಿಗೆ ಅಧಿಕಾರ ಸಿಗುವ ಸಾಧ್ಯತೆಗಳಿದ್ದ ಸಂದರ್ಭದಲ್ಲಿ ಅವಕಾಶ ಮಾಡಿಕೊಡಬೇಕು. ಒಳ ಮೀಸಲಾತಿ ಹಂಚಿಕೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ಕ್ರಮವಹಿಸಬೇಕು.
-ಹರಿಹರ ಆನಂದಸ್ವಾಮಿ, ದಲಿತ ಹೋರಾಟಗಾರ
ಶಿವಕುಮಾರ್ ಅವರು ದೀರ್ಘ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಪತ್ರಿಕೆಯಲ್ಲಿ ಬರೆದು ಸಮಾಜದ ಪರವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ವಿಧಾನ ಪರಿಷತ್‌ನ ಸದಸ್ಯರಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿರುವುದು ಸಂತಸದ ವಿಚಾರ. ದಲಿತರ ಪರವಾಗಿ ಮಾತನಾಡಲು ಒಳ್ಳೆಯ ವೇದಿಕೆ ಸಿಕ್ಕಿದೆ. ಈಗಾಗಲೇ ನಡೆದ ಬೆಳಗಾವಿ ಅಧಿವೇಶನದಲ್ಲಿ ಜನರ ಸಮಸ್ಯೆಗಳನ್ನು ಸದನದ ಮುಂದೆ ಇಟ್ಟಿದ್ದಾರೆ.
-ಕೆ.ವೆಂಕಟೇಶ್, ಪಶುಸಂಗೋಪನೆ ಸಚಿವ







