ನಮ್ಮನ್ನು ಪ್ರಶ್ನಿಸಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು : ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ನಮ್ಮನ್ನು ಪ್ರಶ್ನೆ ಮಾಡಲು ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಅವರು ಅಧಿಕಾರದಲ್ಲಿದ್ದಾಗ ಯಾವುದಾದರೂ ಒಂದು ಪ್ರಕರಣವನ್ನಾದರೂ ಕೊಟ್ಟಿದ್ದರೆ, ನಮ್ಮನ್ನು ಕೇಳಬಹುದು. ನಾವು ಅಧಿಕಾರದಲ್ಲಿದ್ದಾಗ ಸುಮಾರು ಏಳೆಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು ಎಂದರು.
ಬಳ್ಳಾರಿ ಪ್ರಕರಣದ ಬಗ್ಗೆ ಬಿಜೆಪಿ ಜನಾಂದೋಲನ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿರೋಧಪಕ್ಷದಲ್ಲಿರುವಾಗ ಯಾವ ಆಂದೋಲನ, ಪ್ರತಿಭಟನೆಗಳನ್ನು ಮಾಡುತ್ತಾರೆ ಎನ್ನುವುದು ಅವರ ಪಕ್ಷಕ್ಕೆ ಸೇರಿದ ವಿಚಾರ. ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದರು.
ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ:
ಶ್ರೀರಾಮುಲು, ಜನಾರ್ಧನ ರೆಡ್ಡಿಯವರು ಕಾಂಗ್ರೆಸ್ ನಾಯಕರನ್ನು ಏಕವಚನದಲ್ಲಿ ವಾಗ್ದಾಳಿ ಮಾಡಿರುವ ಬಗ್ಗೆ ಮಾತನಾಡಿ, ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ ಎನ್ನುವುದೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ಬರಬಾರದೆಂದು ಏಕೆ ಹೇಳಿದ್ದರು? ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವರ್ತಿಸಿದವರು ಯಾರು? ಲೋಕಾಯುಕ್ತರಾಗಿದ್ದಾಗ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ವರದಿ ಕೊಟ್ಟಿದ್ದಾರೆ ಎಂದರು.
ಅಧಿವೇಶನ ಆಯೋಜಿಸಿರುವುದು ರಾಜಕೀಯ ದುರ್ಬಳಕೆ ಎಂದು ಬಿಜೆಪಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ, ಹೊಸ ವರ್ಷದಲ್ಲಿ ಜಂಟಿ ಅಧಿವೇಶನ ಕಡ್ಡಾಯವಾಗಿ ಕರೆಯಬೇಕೆಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ.ಅದಕ್ಕಾಗಿ ಕರೆದಿದ್ದೇವೆ. MNREGA ಮೂಲಕ ಉದ್ಯೋಗ ಖಾತ್ರಿ, ಶಿಕ್ಷಣ, ಮಾಹಿತಿ ಹಕ್ಕು ಆಹಾರ ಭದ್ರತೆ ತಂದದ್ದು ಯುಪಿಎ ಸರಕಾರ. ಅದನ್ನು ಹಾಳು ಮಾಡಲು ಹೊರಟಿರುವುದನ್ನು ಖಂಡಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.
ಲೋಕಾಯುಕ್ತ ದಾಳಿ: ಕಾನೂನಿನ ಕ್ರಮಕ್ಕೆ ನಾವು ಅಡ್ಡಿಬರುವುದಿಲ್ಲ:
ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿಯಾಗಿರುವ ಬಗ್ಗೆ ಹಾಗೂ ಅಬಕಾರಿ ಸಚಿವರ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಮಾತಾಡಿ, ಈ ಬಗ್ಗೆ ಕಾನೂನಿನ ಕ್ರಮಕ್ಕೆ ನಾವು ಅಡ್ಡಿಬರುವುದಿಲ್ಲ. 40% ಕಮಿಷನ್ ಪಡೆಯುತ್ತಾರೆ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಆರೋಪ ಮಾಡಿದ್ದರಲ್ಲ ಎಂದರು.







