ದಸರಾ ಜಂಬೂ ಸವಾರಿ ಯಶಸ್ವಿಗೊಳಿಸಿ ಕಾಡಿನತ್ತ ಪಯಣ ಬೆಳೆಸಿದ ಪ್ರಶಾಂತ ನೇತೃತ್ವದ ಗಜಪಡೆ

ಮೈಸೂರು : ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಕಾಡಿನಿಂದ ನಾಡಿಗೆ ಆಗಮಿಸಿ ಎರಡು ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ಆನೆಗಳು ಜಂಬೂ ಸವಾರಿ ಯಶಸ್ವಿಗೊಳಿಸಿದ ಖುಷಿಯಲ್ಲಿ ಗುರುವಾರ ಕಾಡಿನತ್ತ ಪ್ರಯಾಣ ಬೆಳೆಸಿದವು.
ಜಂಬೂ ಸವಾರಿ ಯಶಸ್ವಿಗೊಳಿಸಿದ ಕ್ಯಾಪ್ಟನ್ ಪ್ರಶಾಂತ ನೇತೃತ್ವದ ಗಜಪಡೆಯನ್ನು ಜಯಮಾರ್ತಾಂಡ ದ್ವಾರದ ಬಳಿ ಆನೆಗಳನ್ನು ಸಾಲಾಗಿ ನಿಲ್ಲಿಸಿ ಪುರೋಹಿತ ಪ್ರಹ್ಲಾದರಾವ್ ನೇತೃತ್ವದಲ್ಲಿ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನಂತರ ಬೂದುಗುಂಬಳ ಒಡೆದು ದೃಷ್ಟಿ ತೆಗೆದು ಆನೆಗಳಿಗೆ ವಿವಿಧ ಹಣ್ಣು ಹಂಪಲು ಹಾಗೂ ಬೆಲ್ಲ ನೀಡಲಾಯಿತು. ಮಾವುತರು ಹಾಗೂ ಕಾವಾಡಿಗರ ಕುಟುಂಬ ವರ್ಗದವರಿಗೆ ಉಪಹಾರ ನೀಡಿ ಆನೆಗಳೊಂದಿಗೆ ಅವರನ್ನು ಬೀಳ್ಕೊಡಲಾಯಿತು.
ಆ.26ರಂದು ಗಜಪಯಣದ ಮೊದಲ ತಂಡದಲ್ಲಿ ಮತ್ತಿಗೋಡು ಆನೆ ಶಿಬಿರದ ಏಕಲವ್ಯ, ಗೋಪಿ, ಶ್ರೀಕಂಠ, ಕೊಡಗು ಜಿಲ್ಲೆಯ ದುಬಾರೆ ಶಿಬಿರದ ಧನಂಜಯ, ಪ್ರಶಾಂತ, ಶ್ರೀರಾಮ, ಕಾವೇರಿ, ಬಳ್ಳೆ ಶಿಬಿರದ ಮಹೇಂದ್ರ, ಲಕ್ಷ್ಮೀ, 2ನೇ ತಂಡದಲ್ಲಿ ದುಬಾರೆಯ ಸುಗ್ರೀವ, ದೊಡ್ಡಹರವೆಯ ರೂಪಾ, ರಾಂಪುರ ಶಿಬಿರದ ಚೈತ್ರ ಆನೆಗಳು ಆಗಮಿಸಿದ್ದವು. ಸಿಎಫ್ ಡಾ.ಎಸ್.ರವಿಶಂಕರ್, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್, ಆರ್‌ಎಫ್‌ಒ ಯಸ್ಮಾ ಮಾಚಮ್ಮ ಹಲವರು ಇದ್ದರು.






