ದಸರಾ ʼಕಂಬಳʼ ಸ್ಪರ್ಧೆಗೆ ಚಾಲನೆ; 150 ಜೋಡಿ ಕೋಣಗಳು ಭಾಗಿ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯರಿಂದ ಹಸಿರು ನಿಶಾನೆ

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಮೊಟ್ಟ ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜನೆ ಮಾಡಿರುವ ಕರಾವಳಿ ಭಾಗದ ಜನಪ್ರಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಕರೆಯನ್ನು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ರವಿವಾರ ಉದ್ಘಾಟಿಸಿದರು.
ನಗರದ ಸಾತಗಳ್ಳಿ ವಿಟಿಯು ಕಾಲೇಜು ಸಮೀಪದ ವಿಶಾಲವಾದ ಆವರಣದಲ್ಲಿ ದಸರಾ ಕಂಬಳ ಉಪಸಮಿತಿ ವತಿಯಿಂದ ಆಯೋಜಿಸಿರುವ ಎರಡು ದಿನಗಳ ದಸರಾ ಕಂಬಳ ಹಸಿರು ನಿಶಾನೆ ತೋರುವ ಮೂಲಕ ಚಾಲನೆಗೊಂಡಿತು.
ಈ ಸಂದರ್ಭ ಮಾತನಾಡಿದ ಸಚಿವರು, ಕಂಬಳ ಕರಾವಳಿ ಪ್ರದೇಶದ ಗ್ರಾಮೀಣ ಜನಪ್ರಿಯ ಜಾನಪದ ಕ್ರೀಡೆಯಾಗಿದೆ. ಆ ಭಾಗದ ಕ್ರೀಡೆಯು ಆ ಭಾಗಕ್ಕೆ ಮಾತ್ರವೇ ಸೀಮಿತವಾಗಬಾರದು. ಈ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮೂಲಕ ಕಂಬಳ ಪ್ರಸಿದ್ಧಿ ಹೆಚ್ಚಬೇಕು. ಎಲ್ಲೆಡೆ ಜನರು ನೋಡುವಂತ್ತಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ, ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡಿದ ಸರ್ವರಿಗೂ ಧನ್ಯವಾದಗಳು ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ತುಳುನಾಡಿನ ಕಂಬಳ ಮೈಸೂರಿನಲ್ಲಿ ಪ್ರಥಮ ಬಾರಿಗೆ ನಡೆಯುತ್ತಿದೆ. ತುಳುನಾಡಿನಿಂದ ಆಗಮಿಸಿರುವ ಎಲ್ಲರಿಗೂ ಅಭಿನಂದನೆಗಳು ಎಂದರು.
ವಿಧಾನಪರಿಷತ್ ಸದಸ್ಯರಾದ ಕೆ.ಶಿವಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ, ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ, ಚಂದ್ರಹಾಸ್ ಸಾದು ಸನೀಲ್, ಡಾ.ರಕ್ಷಿತ್ ರಾಜ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಮಹಾ ನಗರಪಾಲಿಕೆ ಆಯುಕ್ತರಾದ ಎಂ.ಕೆ.ಸವಿತಾ ಇತರರು ಉಪಸ್ಥಿತರಿದ್ದರು.






