ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ | ಸಿಎಂ ಸಿದ್ಧರಾಮಯ್ಯ ಹೇಳಿದ್ದೇನು ?

ಮೈಸೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ಏನು ಮಾಡಬೇಕು ನೋಡುತ್ತೇವೆ. ಅಗತ್ಯ ಬಿದ್ದರೆ ಎಸ್.ಐ.ಟಿ ರಚನೆ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವಿಷಯದಲ್ಲಿ ಸರಕಾರ ಯಾವುದೇ ಒತ್ತಡಕ್ಕೂ ಮಣಿಯದೇ, ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಗೋಪಾಲ ಗೌಡರು ಎಸ್.ಐ.ಟಿ ರಚನೆ ಮಾಡುವಂತೆ ಹೇಳಿದ್ದಾರೆ. ನಾವು ಅವರ ಹೇಳಿಕೆಗೆ ಪರನೂ ಇಲ್ಲ, ವಿರೋಧನೂ ಇಲ್ಲ. ಕಾನೂನು ಪ್ರಕಾರ ಏನು ಮಾಡಬೇಕೊ ಅದನ್ನು ಮಾಡುತ್ತೇವೆ. ಅಗತ್ಯ ಬಿದ್ದರೆ ಎಸ್.ಐ.ಟಿ. ರಚನೆ ಮಾಡಲು ನಾವು ಸಿದ್ಧ ಎಂದು ಹೇಳಿದರು.
ಪೊಲೀಸರ ವರದಿಯ ಆಧಾರ ಮೇಲೆ ಏನು ಮಾಡಬೇಕು ನೋಡುತ್ತೇವೆ. ಇಂದು ಅಥವಾ ನಾಳೆ ವರದಿ ಕೊಡುವ ಸಾಧ್ಯತೆ ಇದೆ. ದೂರುದಾರ ಕಳೆದ ಹತ್ತು ವರ್ಷ ದಿಂದ ಕಣ್ಮರೆಯಾಗಿ, ಈಗ ಪೊಲೀಸರ ಮುಂದೆ ಬಂದು 164 ಸ್ಟೇಟ್ ಮೆಂಟ್ ಕೊಟ್ಟಿದ್ದಾನೆ. ಅವನು ಏನು ಹೇಳಬೇಕೊ ಹೇಳಿದ್ದಾನೆ. ಹೆಣ ಹೂತು ಹಾಕಿದ್ದೇನೆ ಹೆಣ ತೋರಿಸುವುದಾಗಿ ಹೇಳಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಧರ್ಮಸ್ಥಳ ವಿಚಾರದಲ್ಲಿ ದೂರುದಾರ ಹೇಳಿಕೆ ಕೊಟ್ಟಿದ್ದರೂ ಪೊಲೀಸರು ಸರಿಯಾಗಿ ಕ್ರಮ ಜರುಗಿಸುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾವು ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು, ಕಾನೂನು ಬಿಟ್ಟು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.







