ರಾಜಮನೆತನಕ್ಕೆ ಅಗೌರವದ ಮಾತನಾಡಿಲ್ಲ: ಡಾ.ಯತೀಂದ್ರ

ಮೈಸೂರು : ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದೇನೆಯೇ ಹೊರೆತು ನಾನು ರಾಜಮನೆತನದ ಬಗ್ಗೆ ಅಗೌರವ ತರುವ ರೀತಿ ಮಾತನಾಡಿಲ್ಲ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಗೆ ಬದ್ಧ. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ. ಮೈಸೂರು ಅರಮನೆ ಸರಕಾರದ ಆಸ್ತಿ. ಈ ಕುರಿತು ನಾನು ವಿಚಾರವನ್ನು ಸ್ಪಷ್ಟಪಡಿಸಿದ್ದೇನೆ. ಅದನ್ನೇ ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಈ ವಿಚಾರದಲ್ಲಿ ನಾನು ಯಾವುದೇ ತಪ್ಪು ಎಸಗಿಲ್ಲ. ರಾಜಮನೆತನದವರ ಜೊತೆ ಸಿಎಂ ಮಾತನಾಡುವುದಾಗಿ ಹೇಳಿದ್ದಾರೆ. ಹಾಗಾಗಿ ನಾನು ಹೋಗಿ ಮಾತನಾಡುವ ಅಗತ್ಯವಿಲ್ಲ ಎಂದರು.
ಅಂಬಾರಿ, ಅರಮನೆ ವಿಚಾರದಲ್ಲಿ ನಾನು ತಪ್ಪಾಗಿ ಮಾತನಾಡಿಲ್ಲ. ಅರಮನೆ ಸ್ವಾಧೀನ ಕಾಯ್ದೆ ಪ್ರಕಾರವೇ ನಾನು ಮಾತನಾಡಿದ್ದೇನೆ. ಈ ವಿಚಾರವನ್ನು ತಪ್ಪಾಗಿ ಅರ್ಥೈಸಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ನಾನು ಪ್ರಜ್ಞಾಪೂರ್ವಕವಾಗಿ ಮಾತನಾಡಿದ್ದೇನೆ. ತಪ್ಪಾಗಿದ್ದರೇ ಕ್ಷಮೆ ಕೇಳಬಹುದಿತ್ತು. ನಾನು ಯಾವುದೇ ತಪ್ಪು ಎಸಗಿಲ್ಲ. ಹಾಗಾಗಿ ಕ್ಷಮೆ ಕೇಳಲ್ಲ ಎಂದರು.




