ಶೋಷಿತರಿಗೆ ಸಮಾನತೆ ದೊರೆತಾಗ ಪ್ರಜಾಪ್ರಭುತ್ವದ ಆಶಯ ಈಡೇರಲು ಸಾಧ್ಯ : ಡಾ.ಯತೀಂದ್ರ

ಮೈಸೂರು: ರಾಜಕೀಯ ಸಮಾನತೆ ಸಾಧಿಸಿದ ಮಾತ್ರಕ್ಕೆ ಸಮಾಜದಲ್ಲಿ ನಿಜವಾದ ಸಮಾನತೆ ನೆಲೆಸಲು ಸಾಧ್ಯವಿಲ್ಲ. ಶೋಷಿತ ಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ದೊರೆತಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಈಡೇರಲು ಸಾಧ್ಯ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ರವಿವಾರ ಕರ್ನಾಟಕ ರಾಜ್ಯ ಸರಕಾರಿ ಎಸ್‌ಸಿ ಮತ್ತು ಎಸ್‌ಟಿ ನೌಕರರ ಸಂಘದ ಮೈಸೂರು ವಿಭಾಗದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ 2025-26ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ದ್ವಿತೀ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯದಲ್ಲಿ ವಿಶೇಷ ಸೇವೆ ಸಲ್ಲಿಸಿದ ಮಹನೀಯರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿಗೂ ನ್ಯಾಯಾಂಗ, ಕಾರ್ಯಾಂಗ, ಮಾಧ್ಯಮ ಹಾಗೂ ಉದ್ಯಮ ಕ್ಷೇತ್ರಗಳನ್ನು ಗಮನಿಸಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಶೋಷಿತ ಸಮುದಾಯಗಳ ಪ್ರಾತಿನಿಧ್ಯ ಕಡಿಮೆ ಇದೆ. ದೊಡ್ಡ ಉದ್ಯಮಗಳು, ಬಂಡವಾಳ ಮತ್ತು ಆರ್ಥಿಕ ಸಂಪನ್ಮೂಲಗಳ ಮೇಲೂ ಕೆಲವೇ ವರ್ಗಗಳ ಪ್ರಾಬಲ್ಯ ಮುಂದುವರಿದಿದೆ. ಇದು ಸವಾಜದಲ್ಲಿ ಜಾತಿ ಅಸಮಾನತೆ ಇನ್ನೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಧಕರಿಗೆ ಅಭಿನಂದನೆ: 2026ನೇ ಸಾಲಿನ ರಾಷ್ಟ್ರಪತಿ ಪೊಲೀಸ್ ಪದಕ ಪುರಸ್ಕೃತ ಡಿಐಜಿಪಿ ಎಂ.ಪುಟ್ಟಮಾದಯ್ಯ, ದಸಂಸ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್, ಮೈಸೂರು ನ್ಯಾಯಾಲಯದ 2ನೇ ಜೆಎಂಎಫ್‌ಸಿ ಸಹಾಯಕ ಸರಕಾರಿ ಅಭಿಯೋಜಕರಾದ ಕೆ.ಪಿ.ನೇತ್ರಾವತಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಕೃಷ್ಣಮೂರ್ತಿ ಚಮರಂ ನಿರ್ದೇಶನದ ‘ಇವನಾರವ’ ಕಿರುಚಿತ್ರದ ಪೋಸ್ಟರ್‌ಅನ್ನು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಗಾಂಧಿನಗರ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಮನೋರಖ್ಖಿತ ಬಂತೇಜಿ, ಡಾ.ಕಲ್ಯಾಣ ಸಿರಿ ಬಂತೇಜಿ ಸಾನಿಧ್ಯ ವಹಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ, ಶಾಸಕ ಅನಿಲ್ ಚಿಕ್ಕಮಾದು, ಕೈಗಾರಿಕಾ ಇಲಾಖೆ ಉಪನಿರ್ದೇಶಕಿ ವಿಜಯಲಕ್ಷ್ಮೀ, ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ಅಹಿಂದ ಜವರಪ್ಪ, ಎನ್.ಭಾಸ್ಕರ್, ದ್ಯಾವಪ್ಪ ನಾಯಕ, ಡಾ.ಎಂ.ಡಿ. ಶಿವರಾಮಕೃಷ್ಣ, ಡಿ.ಹರೀಶ್ ಬಾಬು, ರಾಘವೇಂದ್ರ ಅಪುರಾ, ಮಹೇಶ್, ಅಮ್ಮ ರಾಮಚಂದ್ರಪ್ಪಉಪಸ್ಥಿತರಿದ್ದರು.
ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈ ಇಬ್ಬರು ಮಹನೀಯರನ್ನು ಸಮುದಾಯದ ಪ್ರತಿಯೊಬ್ಬರೂ ಸ್ಮರಿಸಬೇಕು.
ಅನಿಲ್ ಚಿಕ್ಕಮಾದು, ಶಾಸಕ
ನಾವೆಲ್ಲರು ಬುದ್ಧನ ಮಾರ್ಗದಲ್ಲಿ ನಡೆದರೆ ಶಾಂತಿ, ನೆಮ್ಮದಿ ನೆಲೆಸಲಿದೆ. ಭಾರತವನ್ನು ಶ್ರೀಮಂತಗೊಳಿಸಬೇಕಾದರೆ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು.
ಮನೋರಖ್ಖಿತ ಬಂತೇಜಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆಯುವುದು ಗುರಿಯಾಗಬೇಕು. ಪೋಷಕರು ಧಾರಾವಾಹಿ ನೋಡುವುದನ್ನು ಬಿಡಬೇಕು. ಮಕ್ಕಳು ಮೊಬೈಲ್ ದಾಸರಾಗಬಾರದು. ಕೆಎಎಸ್ ಆಸೆ ಬಿಟ್ಟುಬಿಡಿ, ಐಎಎಸ್ ಐಪಿಎಸ್ ಪರೀಕ್ಷೆ ತಯಾರಿ ಮಾಡಿಕೊಳ್ಳಬೇಕು.
ಡಾ.ಡಿ.ಚಂದ್ರಶೇಖರಯ್ಯ, ಅಧ್ಯಕ್ಷ, ಕರ್ನಾಟಕ ರಾಜ್ಯ ಸರಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡದೆ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಸರಕಾರಗಳು ಇದನ್ನು ಸರಿಪಡಿಸದಿದ್ದಲ್ಲಿ ರಾಜ್ಯಾದ್ಯಂತ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ಈ ಮೂಲಕ ನಮ್ಮ ಸಮುದಾಯದ ಯುವ ಸಮುದಾಯಗಳ ಶಿಕ್ಷಣ, ಉದ್ಯೋಗದ ಹಕ್ಕನ್ನು ಪಡೆಯಬೇಕಿದೆ.
ಜ್ಞಾನಪ್ರಕಾಶ್ ಸ್ವಾಮೀಜಿ, ಉರಿಲಿಂಗಿ ಪೆದ್ದಿಮಠ
ಕಾರ್ಯಕ್ರಮದಲ್ಲಿ ಭಾಗಿಯಾಗದ ಶಾಸಕರು, ಸಚಿವರು; ಸಾರ್ವಜನಿಕರ ಆಕ್ರೋಶ
ರಾಜ್ಯ ಸರಕಾರಿ ಎಸ್‌ಸಿ ಮತ್ತು ಎಸ್‌ಟಿ ನೌಕರರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಬಿಟ್ಟರೆ ಬೇರೆ ಮೈಸೂರು ವಿಭಾಗದ ಯಾವೊಬ್ಬ ಶಾಸಕರು, ಮಂತ್ರಿಗಳು ಬಾರದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮಕ್ಕೆ ಯಾವೊಬ್ಬ ದಲಿತ ಶಾಸಕರು, ಸಚಿವರು ಬಾರದಿರುವುದು ಸಮುದಾಯಕ್ಕೆ ಬಗೆದ ದ್ರೋಹ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಲು ಬಾರದಷ್ಟು ಕೆಲಸದ ಒತ್ತಡ ನಮ್ಮ ಸಮುದಾಯದ ಶಾಸಕರಿಗಿತ್ತೇ ಎಂದು ಪ್ರಶ್ನಿಸಿದರು.






