ಪ್ರತಾಪ್ ಸಿಂಹ ಅವರನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪಂಜಿನ ಮೆರವಣಿಗೆ

ಮೈಸೂರು/ನಂಜನಗೂಡು: ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಂಜನಗೂಡಿನಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ನಂಜನಗೂಡು-ಚಾಮರಾಜನಗರ ಬೈಪಾಸ್ ನಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿ ಬಳಿ ಪಂಜಿನ ಮೆರವಣಿಗೆ ನಡೆಸಿ ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಈ ವೇಳೆ ಜನಸಂಗ್ರಾಮ ಪರಿಷತ್ ರಾಜ್ಯ ಗೌರವ ಕಾರ್ಯದರ್ಶಿ ನಗರ್ಲೆ ವಿಜಯಕುಮಾರ್ ಮಾತನಾಡಿ, ದಸಂಸ ಮತ್ತು ದಲಿತರ ಅಸ್ಮಿತೆ ನೀಲಿ ಶಾಲಿನ ಬಗ್ಗೆ ಅಪಮಾನಿಸಿರುವ ಪ್ರತಾಪ್ ಸಿಂಹ ಅವರ ವಿರುದ್ಧ ದಲಿತ ಸೌರ್ಜನ್ಯ ಪ್ರಕರಣ ದಾಖಲಾಗಿದೆ. ಪೊಲೀಸ್ ಕರ್ತವ್ಯ ಪಾಲಿಸದೆ ಕಾನೂನು ವಿರುದ್ಧ ನಡೆದುಕೊಂಡಿರುವ ಬಗ್ಗೆಯೂ ಸುಮೊಟೊ ಪ್ರಕರಣ ದಾಖಲಿಸಲಾಗಿದೆ. ಇಂತಹ ಗಂಭೀರ ಪ್ರಕರಣಗಳು ಆತನ ಮೇಲೆ ದಾಖಲಾಗಿದ್ದರೂ ಪೊಲೀಸರು ಬಂಧಿಸದಿರುವುದು ಖಂಡನೀಯ ಎಂದು ಹೇಳಿದರು.
ಅ. 2 ರಂದು ತಿ.ನರಸೀಪುರದಲ್ಲಿ ದಲಿತ, ರೈತ, ಕಾರ್ಮಿಕ ಮತ್ತು ಪ್ರಗತಿಪರ ಸಂಘಟನೆಗಳೊಡಗೂಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅಂದು ನಂಜನಗೂಡಿನ ಅಂಬೇಡ್ಕರ್ ವೃತ್ತದಿಂದ ಬೈಕ್ ರ್ಯಾಲಿ ಮೂಲಕ ನೀಲಿ ಶಾಲು, ಬಾವುಟ ತೊಟ್ಟು ನೂರಾರು ಮಂದಿ ತೆರಳಲಿದ್ದೇವೆ. ಈ ಪ್ರತಿಭಟನೆಗೆ ಸಮಾಜಮುಖಿ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರುಗಳಾದ ಮಲ್ಲಹಳ್ಳಿ ನಾರಾಯಣ, ಕಾರ್ಯ ಬಸವಣ್ಣ, ಮೈಸೂರು ವೀಭಾಗೀಯ ಸಂಚಾಲಕ ಮಂಜು ಶಂಕರಪುರ, ನಗರ್ಲೆ ವಿಜಯಕುಮಾರ್, ಶಂಕರಪುರ ಸುರೇಶ್, ಬಸವಟ್ಟಿಗೆ ನಾಗೇಂದ್ರ, ಗೀಕಹಳ್ಳಿ ಮಹದೇವಸ್ವಾಮಿ, ಮೂಡಹಳ್ಳಿ ಮಹದೇವ, ಆಲತ್ತೂರು ಶಿವರಾಜು, ಮುಳ್ಳೂರು ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.






