ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಬೀಳ್ಕೊಡುಗೆ

ಮೈಸೂರು : ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯನ್ನು ಯಶಸ್ವಿಗೊಳಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ರವಿವಾರ ಬೀಳ್ಕೊಡುಗೆ ನೀಡಲಾಯಿತು.
ಅರಮನೆ ಆವರಣದಲ್ಲಿ ಎರಡು ತಿಂಗಳಿನಿಂದ ಬೀಡು ಬಿಟ್ಟಿದ್ದ 14 ಆನೆಗಳು ಜಂಬೂ ಸವಾರಿ ಯಶಸ್ವಿಗೊಳಿಸಿದ ಗಜಪಡೆ ಕಾಡಿನತ್ತ ಪ್ರಯಾಣ ಬೆಳೆಸಿದವು. ಆನೆಗಳೊಂದಿಗೆ ಬಂದಿದ್ದ ಮಾವುತ, ಕಾವಾಡಿಗರ ಮತ್ತು ಅವರ ಕುಟುಂಬ ಸದಸ್ಯರು ತೆರಳಿದರು.
ರವಿವಾರ ಮುಂಜಾನೆಯೇ ಎಲ್ಲ ಆನೆಗಳಿಗೂ ಮಜ್ಜನ ಮಾಡಿಸಿದ ಮಾವುತ ಮತ್ತು ಕಾವಾಡಿಗರ ಸೊಪ್ಪು, ಕುಸುರೆ ಹಾಗೂ ಹುಲ್ಲನ್ನು ನೀಡಿ ತಮ್ಮ ತಮ್ಮ ಶಿಬಿರಗಳಿಗೆ ತೆರಳಲು ಅಣಿಯಾದರು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯನ್ನು ನಾಡಿನಿಂದ ಬೀಳ್ಕೊಡುವ ವೇಳೆ ಅರಮನೆ ಅಂಗಳದಲ್ಲಿ ಭಾವನಾತ್ಮಕ ಸನ್ನಿವೇಶ ನಿರ್ಮಾಣವಾಗಿತ್ತು. ಮಾವುತರು, ಕಾವಾಡಿಗಳ ಮಕ್ಕಳು ಬೇಸರದಿಂದಲೇ ಬ್ಯಾಗ್‌ಗಳನ್ನು ಎತ್ತಿಕೊಂಡು ತಮ್ಮ ಊರಿನತ್ತ ಹೆಜ್ಜೆ ಹಾಕಿದರು.
ಆನೆಗಳಿಗೆ ಪುರೋಹಿತ ಪ್ರಹ್ಲಾದರಾವ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನಂತರ ಬೂದುಗುಂಬಳ ಒಡೆದು ದೃಷ್ಟಿ ತೆಗೆದು ಆನೆಗಳಿಗೆ ವಿವಿಧ ಹಣ್ಣು ಹಂಪಲು ಹಾಗೂ ಬೆಲ್ಲ ನೀಡಲಾಯಿತು. ಪೂಜೆ ಬಳಿಕ ಮಾವುತರು ಹಾಗೂ ಕಾವಾಡಿಗರ ಕುಟುಂಬ ವರ್ಗದವರಿಗೆ ಉಪಹಾರ ನೀಡಿ ಆನೆಗಳೊಂದಿಗೆ ಅವರನ್ನು ಬೀಳ್ಕೊಡಲಾಯಿತು.
ಆ.4ರಂದು ಗಜಪಯಣದ ಮೊದಲ ತಂಡದಲ್ಲಿ ಮತ್ತಿಗೋಡು ಆನೆ ಶಿಬಿರದ ಕ್ಯಾಪ್ಟನ್ ಅಭಿಮನ್ಯು, ಭೀಮ, ಏಕಲವ್ಯ, ಕೊಡಗು ಜಿಲ್ಲೆಯ ದುಬಾರೆ ಶಿಬಿರದ ಧನಂಜಯ, ಪ್ರಶಾಂತ, ಕಂಜನ್, ಕಾವೇರಿ, ಬಳ್ಳೆ ಶಿಬಿರದ ಮಹೇಂದ್ರ, ಲಕ್ಷ್ಮೀ ಆನೆಗಳು ಅರಮನೆಗೆ ಬಂದಿದ್ದವು. ಆ.25ರಂದು ಎರಡನೇ ತಂಡದಲ್ಲಿ ಮತ್ತಿಗೋಡು ಸಾಕಾನೆ ಶಿಬಿರದ ಶ್ರೀಕಂಠ, ಭೀಮನಕಟ್ಟೆಯ ರೂಪಾ, ದುಬಾರೆಯ ಹೇಮಾವತಿ, ಗೋಪಿ, ಸುಗ್ರೀವ ಆಗಮಿಸಿದ್ದರು.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಎಸಿಪಿ ಚಂದ್ರಶೇಖರ್, ಆರ್‌ಎಫ್‌ಒ ಸೈಯದ್ ನದೀಂ ಇತರರು ಉಪಸ್ಥಿತರಿದ್ದರು.
ಈ ಬಾರಿಯ ಜಂಬೂ ಸವಾರಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಮೆರವಣಿಗೆಯಲ್ಲಿ 14 ಆನೆಗಳು ಭಾಗವಹಿಸಿರುವುದು ಈ ಬಾರಿಯ ವಿಶೇಷ. ಎಲ್ಲ ಆನೆಗಳು, ಮಾವುತರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
-ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ಗಜಪಡೆ ಮಾವುತರ ಮತ್ತು ಕಾವಾಡಿಗರ ವಿವರ ಪಟ್ಟಿಯನ್ನು ವಿಳಂಬವಾಗಿ ಸಲ್ಲಿಸಲಾಗಿತ್ತು. ಬ್ಯಾಂಕ್ ರಜೆ ಇದ್ದ ಕಾರಣ ಹಣ ಡ್ರಾ ಮಾಡಲು ಸಾಧ್ಯವಾಗಲಿಲ್ಲ. ಮಾವುತರು ಮತ್ತು ಕಾವಾಡಿಗರಿಗೆ ನೀಡಬೇಕಾದ ಗೌರವ ಧನವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು.
-ಸುಬ್ರಹ್ಮಣ್ಯ, ಉಪ ನಿರ್ದೇಶಕ, ಅರಮನೆ ಮಂಡಳಿ







