ಮಾಜಿ ಸಚಿವ ರೇವಣ್ಣ ಬಂಧನ ಕಾನೂನು ಪ್ರಕಾರವೇ ಆಗಿದೆ: ಸಿಎಂ ಸಿದ್ಧರಾಮಯ್ಯ

ಮೈಸೂರು: ಮಾಜಿ ಸಚಿವ ರೇವಣ್ಣ ಬಂಧನ ಕಾನೂನು ಪ್ರಕಾರವೇ ಆಗಿದೆ. ಇದರಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ. ಈ ಪ್ರಕರಣ ಅಲ್ಲ, ಯಾವ ಪ್ರಕರಣದಲ್ಲಿಯೂ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.
ನಿನ್ನೆ ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ನನ್ನ ಕಣ್ಣ ಎದುರೆ ರೇವಣ್ಣ ಅವರನ್ನು ಬಂಧನ ಮಾಡಿದರು ಎಂದು ಗುಡುಗಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ರೇವಣ್ಣ ಬಂಧನ ಕಾನೂನು ಪ್ರಕಾರ ಆಗಿದೆ. ನಾವು ಅಧಿಕಾರಿಗಳಿಗೆ ಒತ್ತಡ ಹಾಕಿ ಬಂಧಿಸಲಿಲ್ಲ. ಅಂತಹ ಯಾವ ಕೆಲಸವನ್ನು ನಾವು ಮಾಡುವುದಿಲ್ಲ. ರೇವಣ್ಣ ಬಂಧನ ಮಾಡಿದ್ದರಿಂದ ಯಾವ ಅಧಿಕಾರಿಗಳಿಗೂ ಉಡುಗೊರೆ ನೀಡಿಲ್ಲ ಎಂದು ಹೇಳಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ನಿಮ್ಮನ್ನು ಬಂಧನ ಮಾಡುತ್ತೇವೆ ಎಂದು ಎಚ್.ಡಿ.ದೇವೇಗೌಡರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ಧರಾಮಯ್ಯ, ನಾವು ರೇವಣ್ಣ ಅವರನ್ನು ಕಾನೂನು ಪ್ರಕಾರ ಬಂಧನ ಮಾಡಿದ್ದೇವೆ. ಅವರು ಅಧಿಕಾರಕ್ಕೆ ಬಂದರೆ ಕಾನೂನು ಪ್ರಕಾರ ಮಾಡಲಿ. ಆದರೆ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಲೇವಡಿ ಮಾಡಿದರು.
ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಯಾವ ಬಾಯಲ್ಲಿ ಹೇಳುತ್ತಾರೋ? ಬಾಯಲ್ಲಿ ರಾಜಕೀಯ ಭಾಷಣ ಮಾಡಿದಾಕ್ಷಣ ಅಧಿಕಾರಕ್ಕೆ ಬರಲು ಆಗುತ್ತಾ? ನಾನು ಜೆಡಿಎಸ್ ಪಕ್ಷದ ಅಧ್ಯಕ್ಷನಾಗಿದ್ದಾಗ 59 ಶಾಸಕರನ್ನು ಗೆಲ್ಲಿಸಿದ್ದೆ. ಈಗ ಅವರು ಎಷ್ಟಿದ್ದಾರೆ ಕೇವಲ 17 ಶಾಸಕರು. ಇವರು ಅಧಿಕಾರಕ್ಕೆ ಬರುತ್ತಾರ ಎಂದು ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಇವರು ಅಧಿಕಾರಕ್ಕೆ ಬರಲ್ಲ, ಒಂದು ವೇಳೆ ಬಂದರೂ ಬಿಜೆಪಿಯವರು ಇವರಿಗೆ ಅಧಿಕಾರ ನಡೆಸಲು ಬಿಡುತ್ತಾರ? ಮೊದಲು ಇವರು ಅಧಿಕಾರಕ್ಕೆ ಬರಲ್ಲ, ಈಗ ನಾವು 140 ಸ್ಥಾನ ಗೆದ್ದಿದ್ದೇವೆ. 2028 ಕ್ಕೂ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಮುಂದಿನ 2028 ಕ್ಕೂ ನಿಮ್ಮ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ಧರಾಮಯ್ಯ ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಏನು ಹೇಳುತ್ತದೊ ಅದನ್ನು ಕೇಳುತ್ತೇವೆ ಎಂದು ಹೇಳಿದರು.







