ಶೋಷಿತರು ಹಕ್ಕು-ಅಧಿಕಾರ ಪಡೆಯಲು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಿದ್ಧರಾಗಬೇಕು : ಜಿ.ಪರಮೇಶ್ವರ್ ಕರೆ

ಮೈಸೂರು, ಆ.25 : ಶೋಷಿತರು ಹಕ್ಕು ಮತ್ತು ಅಧಿಕಾರ ಪಡೆಯಲು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕರೆ ನೀಡಿದರು.
ಡಾ.ಜಿ.ಪರಮೇಶ್ವರ್ ಅಭಿಮಾನಿಗಳ ಬಳಗದ ವತಿಯಿಂದ ತಮ್ಮ 74ನೇ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ʼಪರಮೋತ್ಸವʼ ಸಮಾರಂಭದಲ್ಲಿ ಅಭಿಮಾನಿಗಳಿಂದ ವ್ಯಕ್ತವಾದ ಮುಖ್ಯಮಂತ್ರಿ ಕೂಗು, ಜ್ಞಾನ ಪ್ರಕಾಶ್ ಸ್ವಾಮೀಜಿ ಅವರ ದಲಿತ ಮುಖ್ಯಮಂತ್ರಿ ಆಗ್ರಹಕ್ಕೆ ಸೂಚ್ಯವಾಗಿ ಪರಮೇಶ್ವರ್ ಮೇಲಿನಂತೆ ಹೇಳಿದರು.
ಸಮಾನತೆ, ಸ್ಥಾನಮಾನ ಪಡೆಯಲು ಇನ್ನೆಷ್ಟು ವರ್ಷ ಕಾಯಬೇಕು? ಆರ್ಥಿಕವಾಗಿ ಭಾರತ ಜಗತ್ತಿನ 3ನೇ ರಾಷ್ಟ್ರವಾಗಿದೆ. ಚಂದ್ರಯಾನ ಕೈಗೊಳ್ಳುತ್ತೇವೆ. ಬಲಿಷ್ಠವಾದ ಮಿಲಿಟರಿ ಪಡೆ ಇದೆ. ಆದರೆ, ಸಮಾನತೆಯಿಂದ ಬಾಳುತ್ತಿಲ್ಲ. ವಿದೇಶದಲ್ಲೂ ಜಾತಿ ಗುಂಪು ರಚಿಸುತ್ತೇವೆ. ದೇಶ ಬೆಳೆದಿದೆ. ಸೌಲಭ್ಯ ಯಾರಿಗೆ ಸಿಕ್ಕಿದೆ ಎಂದು ಪ್ರಶ್ನಿಸಿದರು.
ಹೃದಯ ಶ್ರೀಮಂತಿಕೆ ಬಂದಾಗ ಭಾರತಕ್ಕೆ ಗೌರವ ಬರುತ್ತದೆ. ಅದಾಗುತ್ತಿಲ್ಲ ಎಂಬ ವಿಷಾದವಿದೆ. ಅಧಿಕಾರ ಮತ್ತು ಹಕ್ಕು ಪಡೆಯಲು ಹೋರಾಟಕ್ಕೆ ಸಿದ್ಧರಾಗಬೇಕು. ಇಲ್ಲದಿದ್ದರೆ ಬಾಬಾ ಸಾಹೇಬರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ನುಡಿದರು.
ಮೈಸೂರಿನ ಅಭಿಮಾನಕ್ಕೆ ಅಭಾರಿಯಾಗಿದ್ದೇನೆ. ಅನೇಕ ವಿಘ್ನ, ಅಡೆತಡೆಗಳು ಎದುರಾದರೂ ಧೈರ್ಯದಿಂದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ರೂಪಿಸಿದ್ದಾರೆ ಎಂದು ಧನ್ಯವಾದ ತಿಳಿಸಿದರು.
ಗಾಂಧಿನಗರ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಅಶೋಕಪುರಂನ ಜ್ಞಾನ ಸ್ವರೂಪನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ ಮುಖ್ಯ ಅತಿಥಿಗಳಾಗಿದ್ದರು. ಬಿಳಿಕೆರೆ ರಾಜು ಪ್ರಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಕೆ.ವಿ.ಅಯ್ಯಣ್ಣ, ಪರಮೇಶ್ವರ್ ಅಭಿಮಾನಿ ಬಳಗದ ಮಂಜುನಾಥ್, ಮನು ಮುಂತಾದವರಿದ್ದರು.
ಶೋಷಿತರಿಗೆ ಅಧಿಕಾರ ಕೊಡಬೇಕು: ಜ್ಞಾನ ಪ್ರಕಾಶ್ ಸ್ವಾಮೀಜಿ
ರಾಜ್ಯದ ಶೋಷಿತ ವರ್ಗಕ್ಕೆ ಅಧಿಕಾರ ಕೊಡಬೇಕೆಂಬುದು ನಾಡಿನ ಜನರ ಒತ್ತಾಯ. ಇಲ್ಲದಿದ್ದರೆ ಪ್ರಜಾಪ್ರಭುತ್ವದ ಆಶಯಕ್ಕೆ ಕಪ್ಪು ಚುಕ್ಕೆ ಎಂದು ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಅಭಿಪ್ರಾಯಪಟ್ಟರು.
ಒಂದು ಸಮುದಾಯದವರು 9 ಬಾರಿ, ಮತ್ತೊಂದು ಸಮುದಾಯದವರು 7 ಬಾರಿ, ಇನ್ನೊಂದು ಸಮುದಾಯದವರು 2 ಬಾರಿ, ಸಣ್ಣ ಪುಟ್ಟ ಸಮುದಾಯದ ಜನರಿಗೂ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದೆ. ಜನಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿರುವ ಶೋಷಿತರು ಮಾತ್ರ ಸಿಎಂ ಸ್ಥಾನದಿಂದ ವಂಚಿತರಾಗಿದ್ದಾರೆ. ಇದು ಸಂವಿಧಾನ ಅಪಮೌಲ್ಯ ಮಾಡುವ ಕ್ರಮ ಎಂದರು.
ರಾಷ್ಟ್ರೀಯ ಪಕ್ಷಗಳ ನೇತಾರರು ಈ ತಪ್ಪನ್ನು ಸರಿಪಡಿಸಬೇಕು. ನೂರಕ್ಕೆ ನೂರರಷ್ಟು ಬೆಂಬಲಿಸಿರುವ ಸಮುದಾಯವನ್ನು ವಂಚಿಸಿದರೆ, ರಾಜ್ಯದಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಪರಮೇಶ್ವರ್ ಸಂವೇದನಶೀಲ ರಾಜಕಾರಣಿ. ಯಾರೊಂದಿಗೂ ಸಂಘರ್ಷ ಇಲ್ಲ. ಅಂಬೇಡ್ಕರ್ ಹಾದಿಯಲ್ಲಿ ಸಾಗುತ್ತಿದ್ದಾರೆ. ಪರಮೇಶ್ವರ್ ಎಡಪಂಥೀಯ ಮತ್ತು ಬಲಪಂಥೀಯ ಎಂದು ಟೀಕಿಸುತ್ತಾರೆ. ಅವರು ನೇರಪಂಥೀಯ ಎಂದರು.
ರಾಜ್ಯದಲ್ಲಿ ಬಿ.ಬಸವಲಿಂಗಪ್ಪ, ಮಲ್ಲಿಕಾರ್ಜುನಸ್ವಾಮಿ, ಬಿ.ರಾಚಯ್ಯ, ಕೆ.ಎಚ್.ರಂಗನಾಥ್ ನಂತರ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ ದಲಿತ ನಾಯಕರಾಗಿದ್ದಾರೆ. ಯಾರಿಗೇ ಆಗಲಿ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಹೇಳಿದರು.
ಡಾ.ಜಿ.ಪರಮೇಶ್ವರ್ ಬೆಂಬಲಕ್ಕೆ ನಿಲ್ಲುತ್ತೇವೆ :
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇನ್ನು ಎತ್ತರದ ಸ್ಥಾನಕ್ಕೆ ಹೋದರೆ ನಾವುಗಳು ಅವರ ಹೆಜ್ಜೆಗೆ ಹೆಜ್ಜೆಯಾಗಿರುತ್ತೇವೆ ಎಂದು ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ ಮತ್ತು ದರ್ಶನ್ ಧ್ರುವನಾರಾಯಣ್ ಬೆಂಬಲ ವ್ಯಕ್ತಪಡಿಸಿದರು.
ಶಾಸಕ ತನ್ವೀರ್ ಸೇಠ್ ಪರಮ ಪಯಣ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಸಮಾಜದಲ್ಲಿ ಸಜ್ಜನರು, ನೇರ-ನುಡಿಯವರು ಕ್ರಮೇಣ ಕಡಿಮೆ ಆಗುತ್ತಿದ್ದಾರೆ. ಸ್ವಚ್ಛ ರಾಜಕಾರಣಕ್ಕೆ ಡಾ.ಜಿ.ಪರಮೇಶ್ವರ ಹೆಸರಾಗಿದ್ದಾರೆ. ಅವರನ್ನು ಎತ್ತರದ ಸ್ಥಾನದಲ್ಲಿ ನೋಡಬೇಕೆಂಬುದು ಆಸೆಯಾಗಿಯೇ ಉಳಿದಿದೆ. ಅವರಿಗೆ ಎತ್ತರದ ಸ್ಥಾನ ಸಿಗಬೇಕು. ಅವರಿಗೆ ಚಾಮುಂಡೇಶ್ವರಿ ಆಶೀರ್ವಾದ ಇದೆ. ಎಂದಿಗೂ ಅವರು ಸೋಲಬೇಕಿಲ್ಲ. ಅವರೊಂದಿಗೆ ಹೆಜ್ಜೆಗೆ ಹೆಜ್ಜೆ ಹಾಕುತ್ತೇವೆ ಎಂದು ತಿಳಿಸಿದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಡಾ.ಜಿ.ಪರಮೇಶ್ವರ್ ಅವರಿಗೆ ಉನ್ನತ ಸ್ಥಾನಮಾನ ಸಿಗಬೇಕು ಎಂದು ಹೇಳಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರೊಂದಿಗೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಇರುವುದಾಗಿ ಹೇಳಿದರು.







