ಎಚ್.ಡಿ.ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿ ಆಗಿದ್ದು ನನ್ನ ಬೆಂಬಲದಿಂದ : ಜಿ.ಟಿ.ದೇವೇಗೌಡ

ಮೈಸೂರು : ಎಚ್.ಡಿ.ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿ ಆಗಿದ್ದು ನನ್ನ ಬೆಂಬಲದಿಂದ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ "ಕುಮಾರ ಪರ್ವ" ಮಾಡಿದ್ದು. ಬೇರೆ ಯಾವ ಕ್ಷೇತ್ರದಲ್ಲೂ ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ನನ್ನನ್ನು ಎರಡು ಸಲ ಮಂತ್ರಿ ಮಾಡಿದ್ದಾರೆ. ಎರಡು ಸಲ ಮುಖ್ಯಮಂತ್ರಿ ಆದದ್ದು ನನ್ನ ಬೆಂಬಲದಿಂದ. ಒಮ್ಮೆ ಕಲಾಮಂದಿರಲ್ಲಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರ ಪರ್ವ ದೊಡ್ಡಮಟ್ಟದಲ್ಲಿ ಮಾಡಿದೆ. ಇದು ಅವರಿಗೂ ಗೊತ್ತು ಎಂದು ಹೇಳಿದರು.
ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷದಿಂದ ಎರಡು ಕಾಲನ್ನು ಹೊರಗಿಟ್ಟಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಬಗ್ಗೆ ಏನು ಹೇಳಿದ್ದಾರೊ ಗೊತ್ತಿಲ್ಲ, ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ಬೇರೆ ರಾಜಕಾರಣ ನನಗೆ ಗೊತ್ತಿಲ್ಲ. ಆ ಕಾರಣದಿಂದಲೇ ಜನರು ನನ್ನನ್ನು ಗೆಲ್ಲಿಸಿದ್ದಾರೆ. 2028 ರ ಚುನಾವಣೆಯಲ್ಲೂ ನೀವೇ ಸ್ಪರ್ಧಿಸಬೇಕು. ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಏನು ಹೇಳುತ್ತಾರೊ ಅದನ್ನೆ ಮಾಡುವುದು ಎಂದು ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ನಾನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮಾತನಾಡಿದ್ದಕ್ಕೆ ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ಹೇಳಿದರು.ನಾನು ಕಾಂಗ್ರೆಸ್ ಗೆ ಹೋಗಿದ್ದೇನೆಯೇ? ಡಿ.ಕೆ.ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿಲ್ಲ. ಚರ್ಚಿಸಿಯೂ ಇಲ್ಲ. ಎಲ್ಲಾ ಕ್ಷೇತ್ರಗಳಂತೆ ನನ್ನ ಕ್ಷೇತ್ರದಕ್ಕೂ ರೂ. 25 ಕೋಟಿ ನೀಡಿದ್ದಾರೆ ಎಂದರು.






