Hassan | ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ; ಪೋಷಕರ ಕ್ಷಮೆ ಕೋರಿದ ಪತ್ರ ಪತ್ತೆ

ಹಾಸನ : ನಗರದ ಎಂ.ಜಿ. ರಸ್ತೆಯಲ್ಲಿರುವ ಒಕ್ಕಲಿಗರ ಸಂಘದ ಮಹಿಳಾ ವಿದ್ಯಾರ್ಥಿನಿಲಯದಲ್ಲಿ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯೊಬ್ಬರು ತನ್ನ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ವರದಿಯಾಗಿದೆ.
ಅರಕಲಗೂಡು ತಾಲೂಕಿನ ಹೊಡೆನೂರು ಗ್ರಾಮದ ಜಯಣ್ಣ ಎಂಬವರ ಪುತ್ರಿ ಲಕ್ಷ್ಮೀ ಎಚ್.ಜೆ. (19) ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಇವರು ಹಾಸನದ ಸೆಂಟ್ರಲ್ ಕಾಮರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕೊಠಡಿಯಲ್ಲಿ ಪತ್ರವೊಂದು ಪತ್ತೆಯಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಪತ್ರದಲ್ಲಿ ಪೋಷಕರ ಕ್ಷಮೆ ಕೋರಿರುವುದರ ಜೊತೆಗೆ, ತಮ್ಮನಿಗೆ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬರೆದಿರುವುದಾಗಿ ವರದಿಯಾಗಿದೆ.
ಪತ್ರದಲ್ಲಿ ಏನಿದೆ?: ತನ್ನ ತಾಯಿಯನ್ನು ಉದ್ದೇಶಿಸಿ ಬರೆದಿರುವುದಾಗಿ ತಿಳಿದುಬಂದಿರುವ ಪತ್ರದಲ್ಲಿ, ‘‘ಸಾರಿ ಅಮ್ಮ, ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಯಾರಿಗೂ ಯಾವತ್ತೂ ಮೋಸ ಮಾಡಿಲ್ಲ. ಯಾರ ಕಣ್ಣಲ್ಲೂ ನೀರು ಹಾಕಿಸಿಲ್ಲ. ಆದರೂ ಜೀವನ ತುಂಬಾ ಅನ್ಯಾಯ ಮಾಡಿಬಿಡ್ತು ಅಮ್ಮ’’ ಎಂದು ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಅಲ್ಲದೆ, ಮಾನಸಿಕವಾಗಿ ಅನುಭವಿಸಿದ ನೋವಿನ ಕುರಿತು ಪತ್ರದಲ್ಲಿ ಬರೆದಿರುವುದಾಗಿ ತಿಳಿದುಬಂದಿದೆ. ತಂದೆಯನ್ನು ಉದ್ದೇಶಿಸಿ ಕ್ಷಮೆ ಕೋರಿರುವುದರ ಜೊತೆಗೆ, ತನ್ನ ಮೇಲೆ ಕೋಪ ಮಾಡಿಕೊಳ್ಳದಂತೆ ಮನವಿ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ತನ್ನ ತಮ್ಮನಿಗೆ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿರುವುದಾಗಿಯೂ ವರದಿಯಾಗಿದೆ.
ಪೊಲೀಸರಿಂದ ತನಿಖೆ: ಘಟನೆಯ ಮಾಹಿತಿ ತಿಳಿದ ಹಾಸನ ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿಯ ಸಾವಿಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳು ಹಾಗೂ ಸಾವಿಗೂ ಮುನ್ನ ನಡೆದಿರಬಹುದಾದ ಘಟನೆಗಳ ಕುರಿತು ತನಿಖೆ ನಡೆಯಬೇಕಿದೆ.
ಪತ್ರದಲ್ಲಿನ ಬರಹದ ಆಧಾರದಿಂದಲೇ ಸಾವಿಗೆ ಕಾರಣವನ್ನು ನಿರ್ಧರಿಸಲು ಸಾಧ್ಯವಿಲ್ಲ. ಪೊಲೀಸ್ ತನಿಖೆಯ ಬಳಿಕವೇ ಘಟನೆಯ ಹಿಂದಿನ ನೈಜ ಸಂಗತಿಗಳು ತಿಳಿದು ಬರಬೇಕಿದೆ.






