ನ.26, 27ರಂದು ಸಂವಿಧಾನ ದಿನಾಚರಣೆಯ ರಾಷ್ಟ್ರೀಯ ಸಮ್ಮೇಳನ : ಎಚ್.ಸಿ.ಮಹದೇವಪ್ಪ

ಮೈಸೂರು : 77ನೇ ಸಂವಿಧಾನ ದಿನಾಚರಣೆಯ ಅಂಗವಾಗಿ ಸಂವಿಧಾನದ ಧ್ವನಿ ಭಾರತೀಯರ ಜೀವಧ್ವನಿ ಆಶಯದಲ್ಲಿ ನವೆಂಬರ್ 26 ಮತ್ತು 27ರಂದು ಮಹಾರಾಜ ಕಾಲೇಜು ಮೈದಾನನಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಮ್ಮೇಳನ ಅಧ್ಯಕ್ಷರಾದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಾಗದ ಐದಾರು ಜಿಲ್ಲೆಗಳ ಪ್ರಗತಿಪರ ಚಿಂತಕರು, ಸ್ನೇಹಿತರು, ಹೋರಾಟಗಾರರು, ಬುದ್ಧಿಜೀವಿಗಳೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶದಲ್ಲಿ ಆಗುತ್ತಿರುವ ಆಡಳಿತಾತ್ಮಕ ದೋಷಗಳು, ಪ್ರಜಾಸತ್ತಾತ್ಮಕ ನಿಲುವುಗಳು, ಸಂವಿಧಾನದ ಆಶಯಗಳು ಹಾಗೂ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ದಲಿತ ಸಂಘಟನೆಗಳ ಐಕ್ಯತಾ ಸಮಿತಿ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ಸಂವಿಧಾನ ಜನಾಂದೋಲನ ಸಮಿತಿ ವತಿಯಿಂದ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಸಂವಿಧಾನ ಜಾರಿಗೆ ಬರುವ ಮುನ್ನವೇ, ಸ್ವಾತಂತ್ರ‍್ಯ ಪೂರ್ವದಲ್ಲಿ ಸಾಮಾಜಿಕ ನ್ಯಾಯ, ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಮಹಾತ್ಮ ಗಾಂಧೀಜಿಯವರಿಂದ ರಾಜರ್ಷಿ ಎಂದು ಕರೆಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಇಡೀ ದೇಶಕ್ಕೆ ಮಾದರಿಯಾದ ಆಡಳಿತ ನೀಡಿದ್ದರು. ಅವರ ಹೆಜ್ಜೆ ಗುರುತುಗಳನ್ನು ಸ್ಮರಿಸುತ್ತಾ ಮೈಸೂರಿನಲ್ಲಿಯೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ರಾಂತ ಮುಖ್ಯ ಚುನಾವಣಾ ಆಯುಕ್ತ ಡಾ.ಶಹಬುದ್ದೀನ್ ಖುರೇಷಿ ಸಮ್ಮೇಳನ ಉದ್ಘಾಟಿಸಲಿದ್ದು, ಮಾಜಿ ಸಭಾಪತಿ ಕೆ.ಆರ್.ರಮೇಶ್‌ಕುಮಾರ್ ಸಮಾರೋಪ ಭಾಷಣ ಮಾಡುವರು ಎಂದರು.
ಸಂವಿಧಾನದ ಆಶಯಗಳು, ಪ್ರಜಾಸತ್ತಾತ್ಮಕ ನಿಲುವುಗಳು, ಸ್ವಾಯತ್ತ ಸಂಸ್ಥೆಗಳ ಕಾರ್ಯವೈಖರಿ, ಮಹಿಳೆಯರು, ಅಲ್ಪಸಂಖ್ಯಾತರು, ಕಾರ್ಮಿಕ ಹಾಗೂ ಕೃಷಿ ಸಮಸ್ಯೆಗಳು, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಕುರಿತು ಎರಡು ದಿನಗಳ ಕಾಲ ಸಮಗ್ರ ಚರ್ಚೆ ನಡೆಯಲಿದೆ. ಎಸ್‌ಐಆರ್ ಪ್ರಜಾಪ್ರಭುತ್ವ ಬೇರನ್ನೇ ಅಲುಗಾಡಿಸುತ್ತಿದ್ದು, ಇದರ ಕುರಿತೂ ಚರ್ಚಿಸಲಾಗುವುದು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದ್ದು, 27ರಿಂದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಂವಿಧಾನದ ಪ್ರಚಾರಯಾನ ನಡೆಯಲಿದೆ. ನ.25ರಂದು ಬೆಂಗಳೂರಿನಿಂದ ಮೈಸೂರಿಗೆ ಸಂವಿಧಾನದ ಸ್ತಬ್ಧಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಈ ಕಾರ್ಯಕ್ರಮವನ್ನು ವರ್ಷವಿಡೀ ಆಚರಿಸಲು ತೀರ್ಮಾನಿಸಿದ್ದು, 31 ಜಿಲ್ಲೆಗಳಲ್ಲೂ ಆಯೋಜಿಸಲಾಗುತ್ತಿದೆ. 2027ರಲ್ಲಿ ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹರಿಹರ ಆನಂದಸ್ವಾಮಿ, ಕೊಸಕೋಟೆ ಬಸವರಾಜು, ಎನ್.ಭಾಸ್ಕ್, ವಡ್ಡಗೆರೆ ಚಿನ್ನಸ್ವಾಮಿ ಇದ್ದರು.
ದೇಶಕ್ಕೆ ಸ್ವಾತಂತ್ರ‍್ಯ ಬಂದು 80 ವರ್ಷಗಳಾದರೂ ಸಂವಿಧಾನ ಪರಿಪೂರ್ಣವಾಗಿ ಜಾರಿಯಾಗಿಲ್ಲ. ಯುವಕರ ಭವಿಷ್ಯ, ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬ ಪ್ರಜೆಯೂ ಜಾಗೃತರಾಗಬೇಕು. ಇದಕ್ಕಾಗಿ ಎರಡನೇ ಸ್ವಾತಂತ್ರ‍್ಯ ಸಂಗ್ರಾಮದ ಮಾದರಿಯಲ್ಲಿ ಚಳವಳಿಯಾಗಬೇಕು. ಈ ಸಮ್ಮೇಳನದಲ್ಲಿ ಯಾವುದೇ ರಾಜಕೀಯ ಅಜೆಂಡಾ ಇರುವುದಿಲ್ಲ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕಿದೆ.
-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ






